ಕಾಸರಗೋಡು, ಫೆ.02 (DaijiworldNews/MB) : ಚಿನ್ನಾಭರಣ ಏಜೆಂಟ್ಗಳನ್ನು ಅಪಹರಿಸಿ ಸುಮಾರು 14 ಲಕ್ಷ ರೂ. ನಗದನ್ನು ದರೋಡೆ ಮಾಡಿದ ಇಬ್ಬರನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 7 ಮಂದಿ ತಲೆಮರೆಸಿಕೊಂಡಿದ್ದಾರೆ.

ಬಂಧಿತರನ್ನು ಬಂಟ್ವಾಳ ಮೋಂಟುಗೋಳಿಯ ಅಬ್ದುಲ್ ನಾಸರ್ (27) ಮತ್ತು ತಲಪಾಡಿ ಕೋಟೆಕ್ಕಾರ್ ಹಿದಾಯತ್ ನಗರದ ಅಬ್ದುಲ್ ರಹಮಾನ್ (45) ಎಂದು ಗುರುತಿಸಲಾಗಿದೆ. ಉಳಿದ 7 ಮಂದಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಡಿಸೆಂಬರ್ 10 ರಂದು ಮುಂಜಾನೆ 5.30 ರ ಸುಮಾರಿಗೆ ಘಟನೆ ನಡೆದಿತ್ತು. ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಕಾರನ್ನು ಮಂಜೇಶ್ವರ ಸಮೀಪ ತಡೆದ 9 ಮಂದಿಯ ತಂಡ ಕಾರಲ್ಲಿದ್ದ ಮಹೇಶ್ ಪಾಟೀಲ್ ಮತ್ತು ಅವಿನಾಶ್ ಎಂಬವರನ್ನು ಬಲವಂತವಾಗಿ ಇನ್ನೊಂದು ಕಾರಿನಲ್ಲಿ ಹತ್ತಿಸಿ ಕುರುಡಪದವು ಎಂಬಲ್ಲಿನ ನಿರ್ಜನ ಸ್ಥಳಕ್ಕೆ ಕರೆದೊಯ್ದು ನಗದನ್ನು ದರೋಡೆ ಮಾಡಿದ್ದು, ಬಳಿಕ ಇಬ್ಬರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಬಳಿಕ ಇಬ್ಬರು ಬಂದು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಪ್ರಯಾಣಿಸಿದ್ದ ಕಾರು ಮಂಜೇಶ್ವರ ಪೆಟ್ರೋಲ್ ಬ್ಯಾಂಕ್ ಸಮೀಪದಿಂದ ಪತ್ತೆಯಾಗಿತ್ತು.
ಈ ಕಾರನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಕಾರು ಕಾಸರಗೋಡು ಚೌಕಿ ಪರಿಸರದ ವ್ಯಕ್ತಿಯಿಂದ ಬಾಡಿಗೆ ಪಡೆದುದ್ದಾಗಿ ತಿಳಿದುಬಂದಿದೆ. ಹೆಚ್ಚಿನ ತನಿಖೆಯಿಂದ ಆರೋಪಿಗಳ ಸುಳಿವು ಲಭಿಸಿದ್ದು ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ನೇತೃತ್ವದ ತಂಡದಲ್ಲಿ ಮಂಜೇಶ್ವರಠಾಣಾಧಿಕಾರಿ ಶೈನ್ ಕೆ.ಪಿ, ಸಬ್ಇನ್ಸ್ಪೆಕ್ಟರ್ ನಾರಾಯಣನ್ ನಾಯರ್, ರಾಜೇಶ್, ಶಿವಕುಮಾರ್, ಆಸ್ಟಿನ್ ತಂಬಿ, ಶಜಿಸ್, ಪ್ರವೀಣ್ ಮೊದಲಾದವರಿದ್ದರು.