ಮಂಗಳೂರು, ಫೆ. 02 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಎಂಬಲ್ಲಿ ಆಳುಪ ದೊರೆ ಮೂರನೇ ಕುಲಶೇಖರನ ಶಾಸನವನ್ನು ಇಲ್ಲಿನ ಸ್ಥಳೀಯ ಯುವಕರು ಪತ್ತೆ ಮಾಡಿದ್ದಾರೆ.

ಈ ಶಾಸನವನ್ನು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಇವರ ಜೊತೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಅವರು ಕ್ಷೇತ್ರಕಾರ್ಯ ಶೋಧನೆಯಲ್ಲಿ ಸಹಾಯ ನೀಡಿದ್ದಾರೆ. ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿದ್ದು, ಸ್ಥಳೀಯರ ಸಹಕಾರದಿಂದ ಇದನ್ನು ಸರಿಯಾಗಿ ಜೋಡಿಸಲಾಗಿದೆ. 19 ಸಾಲುಗಳನ್ನು ಒಳಗೊಂಡಿರುವ ಈ ಶಾಸನವು ಕಣ ಶಿಲೆ(ಗ್ರಾನೈಟ್)ಯಲ್ಲಿ ಕೊರೆಯಲ್ಪಟ್ಟಿದೆ. ಈ ಶಾಸನ 4 ಅಡಿ ಎತ್ತರ ಹಾಗೂ 2 ಅಡಿ ಅಗಲವಿದ್ದು, ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿದೆ.
ಶಾಸನದಲ್ಲಿ ಮೂರನೇ ಕುಲಶೇಖರನನ್ನು ಶ್ರೀ ಮತ್ಪ್ಯಾಂಡ್ಯ ಚಕ್ರವರ್ತಿರಾಯ ಗಜಾಂಕುಶ ವೀರ ಕುಲಶೇಖರ ಎಂದು ಸಂಭೋದಿಸಲಾಗಿದೆ.