ಚಿತ್ರದುರ್ಗ: ಕೇವಲ 11 ದಿನದಲ್ಲಿ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶ ಬಿ ಎಸ್ ವಸ್ತ್ರಮಠ ಇದೀಗ ಮತ್ತೊಮ್ಮೆ ಅಂಥದ್ದೇ ಕೀರ್ತಿಗೆ ಪಾತ್ರರಾಗಿದ್ದಾರೆ. ತನ್ನ ಪತ್ನಿಯನ್ನು ಕೊಂದ ಪತಿಗೆ ಕೇವಲ 13 ದಿನಗಳಲ್ಲಿಯೇ ಜೀವಾವಧಿ ಶಿಕ್ಷೆಯನ್ನು ನ್ಯಾಯಾಧೀಶ ಬಿ ಎಸ್ ವಸ್ತ್ರಮಠ ವಿಧಿಸಿದ್ದಾರೆ. ಕಳೆದ ಜೂನ್ 27ರಂದು ಪತ್ನಿ ಸಾಕಮ್ಮಳ ಮೇಲೆ ಶಂಕೆಯಿಂದ ಪತಿ 28 ವರ್ಷದ ಶ್ರೀಧರ್ ಹೊಡೆದು ಸಾಯಿಸಿದ್ದ. ದಂಪತಿಯ ಮೂರೂವರೆ ವರ್ಷದ ಮಗ ನೀಡಿದ ಹೇಳಿಕೆ ಆಧಾರದ ಮೇಲೆ ಪತಿಗೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ನೀಡಿದ್ದಾರೆ.
ನ್ಯಾಯಾಧೀಶ ಬಿ ಎಸ್ ವಸ್ತ್ರಮಠ
ಪತ್ನಿ ಹಂತಕನ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅವರು ಮಕ್ಕಳನ್ನು ಎತ್ತಿಕೊಳ್ಳಲು ಅಪರಾಧಿಗೆ ಅವಕಾಶ ನೀಡಿದ್ದು ಅಲ್ಲಿ ನೆರೆದಿದ್ದವರ ಅನೇಕರ ಕಣ್ಣಾಲಿಗಳನ್ನು ಒದ್ದೆ ಮಾಡಿತು. ತೀರ್ಪು ನೀಡುವ ದಿನ ಅಪರಾಧಿಗೆ ‘ಏನಾದರೂ ಹೇಳಲು ಇದೆಯೇ?’ ಎಂದು ಪ್ರಶ್ನಿಸಿದ ಬಳಿಕ ಇಲ್ಲವೆಂದು ಅಪರಾಧಿ ತಲೆ ಆಡಿಸುತ್ತಿದ್ದಂತೆ ನ್ಯಾಯಾಧೀಶರು ಆದೇಶ ಓದಿದರು. ಅಪರಾಧಿ ಶ್ರೀಧರ್ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ತುಂಬಿಕೊಂಡು ಏನನ್ನೋ ಹೇಳಲು ತಡಬಡಿಸಿದ. ನ್ಯಾಯಾಧೀಶರು ಏನು? ಎಂದು ಪ್ರಶ್ನಿಸಿದಾಗ ತನ್ನ ವಿರುದ್ದ ಸಾಕ್ಷಿ ನುಡಿದ ತನ್ನದೇ ಮಗುವನ್ನು ಮುದ್ದಿಸಿಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದ. ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು ಮಕ್ಕಳನ್ನು ಕರೆತರಲು ಹೇಳಿದಾಗ, ಮಗ ಧನುಷ್ ಮಾತ್ರ ‘ನೀನೆ...’ ಎಂದು ತಂದೆಯತ್ತ ಬೊಟ್ಟು ಮಾಡಿದಾಗ ನ್ಯಾಯಾಲಯದಲ್ಲಿ ಸಂಚಲನವುಂಟಾಯಿತು. ಅಪರಾಧಿ ಸ್ಥಾನದಲ್ಲಿದ್ದ ತಂದೆ ಅಂಗಲಾಚಿದರೂ ಮಗ ಅಜ್ಜಿಯ ಸೆರಗು ಬಿಟ್ಟು ಹೋಗಲಿಲ್ಲ.ಕೊನೆಗೆ ಮತ್ತೊಬ್ಬ ಮಗ ಮೈಲಾರಿಯನ್ನು ಎತ್ತಿಕೊಂಡು ಮುತ್ತುಕೊಟ್ಟ ಶ್ರೀಧರ್, ಕೊಂಚ ಒತ್ತಾಯಪೂರ್ವಕವಾಗಿಯೇ ಧನುಷ್ನನ್ನು ಹೆಗಲಿಗೆ ಹಾಕಿಕೊಂಡು ಕಣ್ಣೀರುಗರೆದ. ಆದರೆ, ಮೂರುವರೆ ವರ್ಷದ ಪುತ್ರ ಮಾತ್ರ ತಂದೆಯ ಮುಖ ನೋಡಲಿಲ್ಲ. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಅಪ್ಪ–ಮಗನ ನಡುವೆ ನಡೆದ ಮೌನ ಸಂವಹನ ನ್ಯಾಯಾಲಯವನ್ನು ಸ್ತಬ್ಧವಾಗಿಸಿತ್ತು.
ಕೊನೆಗೆ ನ್ಯಾಯಾಧೀಶರು, "ಈ ಇಬ್ಬರು ಪುಟ್ಟ ಮಕ್ಕಳು ನಿನ್ನವರೇ ಎಂದಿಗೂ ಮಕ್ಕಳನ್ನು ದ್ವೇಷಿಸಬೇಡ.. ಅನಾಥರಾದ ಮಕ್ಕಳಿಗೆ ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇನೆ" ಎಂದಾಗ ಅಪರಾಧಿ ಶ್ರೀಧರ್ ಮೌನವಾಗಿಯೇ ತಲೆಯಾಡಿಸಿದ.
ನ್ಯಾಯಾಧೀಶ ಬಿ ಎಸ್ ವಸ್ತ್ರಮಠ , ಈ ಹಿಂದೆ 65 ವರ್ಷದ ವೃದ್ಧೆ ಪತ್ನಿಯನ್ನು ಹೊಡೆದು ಸಾಯಿಸಿದ್ದ ಪ್ರಕರಣ ವಿಚಾರಣೆ ನಡೆಸಿ ಕೇವಲ 11 ದಿನಗಳಲ್ಲಿ ವೃದ್ಧ ಪತಿಗೆ ಜೀವಾವಧಿ ಶಿಕ್ಷೆ ನೀಡಿದ್ದರು. ಮೊಣಕಾಲ್ಮೂರಿನಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದ 14 ಮಂದಿಯ ಕುಟುಂಬದವರಿಗೆ 1.14 ಕೋಟಿ ರೂಪಾಯಿ ಪರಿಹಾರ ನೀಡಿ ಕೇವಲ 18 ದಿನಗಳಲ್ಲಿ ತೀರ್ಪು ನೀಡಿದ್ದರು. ಮೋಟಾರು ವಾಹನ ಅಪಘಾತ ಕೇಸಿನಲ್ಲಿ ದೇಶದಲ್ಲಿಯೇ ಇದು ಅತ್ಯಂತ ತ್ವರಿತವಾಗಿ ನಡೆದ ವಿಚಾರಣೆ ಎಂದು ಹೆಸರಾಗಿತ್ತು.