ಕಡಬ, ಫೆ. 03 (DaijiworldNews/SM): ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದು ಮನೆಯ ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ವಿಫಲವಾಗಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಂತೆ ಶೌಚಾಲಯದಿಂದ ಜಿಗಿದ ಚಿರತೆ ತಪ್ಪಿಸಿಕೊಂಡು ಪರಾರಿಯಾಗಿದೆ.

ಸುಬ್ರಹ್ಮಣ್ಯ ಸಮೀಪದ ಕೈಕಂಬ ನಿವಾಸಿ ರೇಗಪ್ಪ ಎಂಬವರ ಮನೆಯ ಸಮೀಪ ಸಾಕು ನಾಯಿಯನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದೆ. ಚಿರತೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕುನಾಯಿಯು ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೊಕ್ಕಿದೆ. ಈ ವೇಳೆ ಚಿರತೆಯು ನಾಯಿಯನ್ನು ಬೆನ್ನಟ್ಟಿ ಶೌಚಾಲಯದ ಒಳಗೆ ನುಗ್ಗಿದೆ. ಇದನ್ನು ಗಮನಿಸಿದ ಮನೆಯವರು ಹೊರಗಿನಿಂದ ಶೌಚಾಲಯದ ಬಾಗಿಲನ್ನು ಮುಚ್ಚಿದ್ದಾರೆ.
ನಾಯಿ ಮತ್ತು ಚಿರತೆ ಎರಡೂ ಶೌಚಾಲಯದ ಒಳಗೆ ಬಂಧಿಯಾಗಿದ್ದವು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖಾ ಅಧಿಕಾರಿಗಳು ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ. ವೇಳೆ ಚಿರತೆಯು ತಪ್ಪಿಸಿಕೊಂಡು ಕಾಡಿನತ್ತ ಓಡಿ ಪರಾರಿಯಾಗಿದೆ.
ಇನ್ನು ಕಾರ್ಯಾಚರಣೆ ವಿಳಂಬ ನಡೆಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.