ಮಂಗಳೂರು, ಫೆ. 03 (DaijiworldNews/SM): ಹೆದ್ದಾರಿಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಗ್ಯಾಸ್ ಅನಿಲ ಟ್ಯಾಂಕರ್ ಗಳ ಅಸುರಕ್ಷಿತ ಚಾಲನೆಯಿಂದ ತೊಂದರೆಯಾಗುತ್ತಿದೆ, ಇವುಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕೆಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡುತ್ತಿದ್ದರು. ಅನಿಲ ಟ್ಯಾಂಕರ್ ಗಳ ಅಪಘಾತದಿಂದಾಗಿ ಹೆಚ್ಚಿನ ಅನಾಹುತಗಳಾಗುವ ಸಾಧ್ಯತೆ ಇರುವ ಹಿನ್ನೆಲೆ ಅವುಗಳ ಸಾಗಾಣಿಕೆಗೆ ನಿಗಧಿ ಪಡಿಸಿರುವ ಸಮಯದಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ಅಂತಹ ಲಾರಿಗಳಿಗೆ ದಂಡ ವಿಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನಿಲ ಟ್ಯಾಂಕರ್ ಗಳ ಅಪಘಾತದಿಂದ ಜಿಲ್ಲೆಯಲ್ಲಿ ರಸ್ತೆಗಳು 10 ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಗಳು ಬಂದ್ ಆಗಿ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದ ಅವರು, ಅಪಘಾತವಾದ ಸಂದರ್ಭದಲ್ಲಿ ಅವುಗಳ ನಿರ್ವಹಣೆಗೆ ಗ್ಯಾಸ್ ಕಂಪನಿಯ ಅಧಿಕಾರಿಗಳು ಶೀಘ್ರದಲ್ಲಿಯೇ ಸ್ಪಂದಿಸಬೇಕೆಂದು ಸೂಚನೆ ನೀಡಿದರು.
ಟ್ಯಾಂಕರ್ ವಾಹನಗಳ ಚಾಲನೆಗೆ ಎರಡು ಜನ ಚಾಲಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಈ ವಾಹನಗಳ ಚಾಲನೆಗೆ ಅವಕಾಶ ಮಾಡಿಕೊಡದಂತೆ ಗ್ಯಾಸ್ ಕಂಪನಿಯವರು ಕಾರ್ಯಪ್ರವೃತ್ತರಾಗಬೇಕು ಎಂದರು.
ಗ್ಯಾಸ್ ಕಂಪೆನಿಗಳು ವಾಹನಗಳಿಗೆ ಗ್ಯಾಸ್ ತುಂಬುವ ಬದಲಿ ವ್ಯವಸ್ಥೆಗಳನ್ನು ಬೇರೆ ಕಡೆಗಳಲ್ಲಿ ಮಾಡಿಕೊಂಡು ಜಿಲ್ಲಾ ಗ್ಯಾಸ್ ಜಿಲ್ಲಾ ಗ್ಯಾಸ್ ಟ್ಯಾಂಕರ್ಗಳ ದಟ್ಟಣೆಯನ್ನು ಕಡಿಮೆ ಮಾಡಬೇಕು. ತಪ್ಪಿದಲ್ಲಿ, ಜಿಲ್ಲೆಯಲ್ಲಿ ಟ್ಯಾಂಕರ್ ವಾಹನಗಳ ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.