ಬಂಟ್ವಾಳ, ಫೆ. 03 (DaijiworldNews/SM): ಕಲ್ಲಡ್ಕದಲ್ಲಿ ಗ್ಯಾಸ್ ಟ್ಯಾಂಕರ್ ವೊಂದು ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗ್ಯಾಸ್ ಟ್ಯಾಂಕರ್ ನ ವೀಲ್ ತುಂಡಾಗಿ ರಸ್ತೆ ಮಧ್ಯದಲ್ಲಿ ಬಾಕಿಯಾಗಿ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.

ಘಟನೆಯಲ್ಲಿ ಗ್ಯಾಸ್ ಟ್ಯಾಂಕರ್ ಚಾಲಕನಿಗೆ ಅಲ್ಪಸ್ವಲ್ಪ ಗಾಯವುಂಟಾಗಿದೆ. ಬೆಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ರಸ್ತೆಯ ಮಧ್ಯದಲ್ಲಿ ವೀಲ್ ತುಂಡಾಗಿ ನಿಂತ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿತ್ತು. ಅಪಘಾತದಲ್ಲಿ ಕಂಟೈನರ್ ಲಾರಿಯ ಡೀಸಲ್ ಟ್ಯಾಂಕ್ ಹೊಡೆದು ಸಾವಿರಾರು ರೂ ನಷ್ಟ ಸಂಭವಿಸಿದೆ. ಗ್ಯಾಸ್ ಟ್ಯಾಂಕರ್ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದೆ. ಅಪಘಾತ ನಡೆಯುವ ಸಂದರ್ಭದಲ್ಲಿ ಎರಡು ಬೈಕ್ ಮತ್ತು ಒಂದು ಕಾರು ಸ್ವಲ್ಪ ದರದಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ನನ್ನು ನೋಡಿದ ಬೈಕ್ ಸವಾರರು ಮತ್ತು ಕಾರು ಚಾಲಕ ರಸ್ತೆಯಿಂದ ಬದಿಗೆ ಸರಿಸಿ ಚರಂಡಿಗಿಳಿದು ಹೋದದರಿಂದ ಪ್ರಾಣಾಪಯದಿಂದ ಪಾರಾಗಿದ್ದರು ಎನ್ನಲಾಗಿದೆ.ಆದರೆ ಅ ಬಳಿಕ ಎದುರಿನಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿಯಾಗಿ ಲಾರಿ ರಸ್ತೆ ಮಧ್ಯೆ ನಿಂತಿತ್ತು.