ಉಡುಪಿ, ಸೆ 28: ಎರಡು ವರ್ಷದ ಹಿಂದೆ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲವು ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದ ತಿಮ್ಮ ಎಂಬವರು ಶಿಕ್ಷೆಗೆ ಒಳಗಾದ ಅಪರಾಧಿ 2014 ರ ಎಪ್ರಿಲ್ 23 ರಂದು ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ 8 ಹಾಗೂ 9 ವರ್ಷದ ವಯಸ್ಸಿನ ಇಬ್ಬರು ಬಾಲಕಿಯರಿಗೆ ಮಾವಿನ ಹಣ್ಣು ಕೊಡಿಸುವುದಾಗಿ ಅಮಿಷವೊಡ್ಡಿ ಹಾಡಿಗೆ ಕರೆದುಕೊಂಡು ಹೋಗಿ ಅಪರಾಧಿ ಅತ್ಯಾಚಾರ ಎಸಗಿದ್ದನು. ಅಪರಾಧಿಯ ಕೃತ್ಯದ ಬಗ್ಗೆ ಮಕ್ಕಳು ಮನೆಯಲ್ಲಿ ತಿಳಿಸಿದ್ದು ಮಕ್ಕಳಿಬ್ಬರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅಪರಾದಿ ತಿಮ್ಮನ ಮೇಲೆ ಕುಂದಾಪುರ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿಯಲಡಿ ಕುಂದಾಪುರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಲಿಸರು ತಿಮ್ಮನನ್ನು ಎಪ್ರಿಲ್ 24 ರಂದು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ತಿಮ್ಮನ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಫೋಕ್ಸೋ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ 17 ಸಾಕ್ಷಿಗಳ ಹೇಳಿಕೆ ಪಡೆದಿತ್ತು. ವಿಚಾರಣೆಯ ವೇಳೆ ಅಪರಾಧಿಯ ಕೃತ್ಯ ಸಾಬೀತಾಗಿರುವುದು ದೃಢಪಟ್ಟ ವಿಶೇಷ ನ್ಯಾಯಾಲದ ನ್ಯಾಯಾದೀಶ ವೆಂಕಟೇಶ್ ನಾಯ್ಕ್ ಅವರು ಅಪರಾಧಿಗೆ 7 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಹಾಗೂ ಪೋಕ್ಸೋ ಸೆಕ್ಷನ್ ಪ್ರಕಾರ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.