ಪುತ್ತೂರು, ಫೆ.04 (DaijiworldNews/PY): ಜನವರಿ ಮೊದಲ ವಾರದಲ್ಲಿ ಚಳಿ ಸಹಿತ ಮಳೆಯಾದ ಕಾರಣ ಗೇರು ಹೂ ನಿಗದಿತ ಕಾಲಕ್ಕಿಂತ ಬೇಗನೇ ಚಿಗುರೊಡೆದಿದೆ. ಆದರೆ, ಟೀ ಸೊಳ್ಳೆ ಕಾಟದಿಂದ ಗೇರು ಪರಾಗಸ್ಪರ್ಶಕ್ಕೆ ತೊಂದರೆ ಉಂಟಾಗಿದೆ.

ಸಾಂದರ್ಭಿಕ ಚಿತ್ರ
ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಚಳಿ ಇದ್ದು, ಜನವರಿ ತಿಂಗಳಿನಲ್ಲಿ ಮಳೆಯಾಗಿದೆ. ಈ ಕಾರಣದಿಂದ ಗೇರು ಹೂ ಚಿಗುರೊಡೆಯುವ ಪ್ರಮಾಣವು ಸ್ವಲ್ಪ ವೇಗ ಪಡೆದಿದೆ. ಗೇರು ಹೂವಿನ ಪರಿಮಳಕ್ಕೆ ದುಂಬಿಗಳ ಆಕರ್ಷಿತವಾಗಿ ಪರಾಗಸ್ಪರ್ಶ ಮಾಡುವುದು ಸಾಮಾನ್ಯವಾಗಿದೆ. ಆದರೆ, ಮಳೆಯ ಕಾರಣದಿಂದ ಟೀ ಜಾತಿಯ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರವಾದ ಸ್ಥಿತಿ ಉಂಟಾಗಿದ್ದು, ಚಿಗುರೊಡೆದ ಹೂವಿನ ರಸವನ್ನು ಹೀರುವ ಕಾರಣ ಗೇರು ಪರಾಗಸ್ಪರ್ಶಕ್ಕೆ ತೊಂದರೆ ಉಂಟಾಗಿದೆ.
"ಗೇರು ಕೃಷಿಯನ್ನು ಶಿವಮೊಗ್ಗ ಸೇರಿದಂತೆ, ಗದಗ, ಹಾವೇರಿ, ಚಿತ್ರದುರ್ಗ, ಧಾರವಾಡ, ಬೆಳಗಾವಿ, ತುಮಕೂರು, ಕೋಲಾರ ಮುಂತಾದ ಕಡೆ ಉತ್ತಮವಾಗಿ ಬೆಳೆಯಲಾಗುತ್ತದೆ. ಈ ಸ್ಥಳಗಳಲ್ಲಿ ಹವಮಾನ ವೈಪರೀತ್ಯ ಹಾಗೂ ಟೀ ರೀತಿಯ ಸೊಳ್ಳೆಗಳ ಸಮಸ್ಯೆ ಸ್ವಲ್ಪ ಕಡಿಮೆ. ಈ ಬಾರಿ ಕರಾವಳಿಯಲ್ಲಿ ಮಾತ್ರ ಸೊಳ್ಳೆ ಕಾಟ ಹಾಗೂ ಹವಮಾನ ಸಮಸ್ಯೆ ಉಂಟಾಗಿದ್ದು, ಇದರಿಂದ ಕರ್ನಾಟಕದ ಗೋಡಂಬಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಯದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
"ಫೆಬ್ರವರಿಯಲ್ಲಿ ಗೇರು ಬೆಲೆಯನ್ನು ನಿಗದಿಪಡಿಸಲಾಗುವುದು ಹಾಗೂ ಉತ್ತಮ ಬೆಲೆಯನ್ನು ನಿಗದಿಪಡಿಸುವ ನಿರೀಕ್ಷೆ ಇದೆ" ಎಂದು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ.ಮೋಹನ್ ಹೇಳಿದ್ದಾರೆ.