ಮಂಗಳೂರು, ಫೆ.04 (DaijiworldNews/MB) : ''ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವತ್ತ ವಿಶ್ವ ಹಿಂದೂ ಪರಿಷತ್ತು ಚಿತ್ತ ನೆಟ್ಟಿದೆ. ಆದರೆ ಹಿಂದೂ ರಾಷ್ಟ್ರವೆಂದರೆ ಮುಸ್ಲಿಮರನ್ನು, ಅಲ್ಪಸಂಖ್ಯಾತರನ್ನು ವಿರೋಧ ಮಾಡುವುದು ಎಂದು ಅರ್ಥವಲ್ಲ'' ಎಂದು ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ ಹೇಳಿದರು.

ದಾಯ್ಜಿವಲ್ಡ್ ವಾಹಿನಿಯ ರಫ್ ಆಂಡ್ ರೈಟ್ ಕಾರ್ಯಕ್ರಮದಲ್ಲಿ ಸಂದರ್ಶಕ, ವಾಹಿನಿಯ ಸಂಪಾದಕ ವಾಲ್ಟರ್ ನಂದಳಿಕೆ ಅವರು ಕೇಳಿದ ಪ್ರಶ್ನಗೆ ಉತ್ತರಿಸಿದ ಶರಣ್ ಅವರು, ''ದೇಶದಲ್ಲಿರುವ ಹಿಂದೂಗಳನ್ನು ಒಟ್ಟು ಮಾಡುವುದು, ನಮ್ಮ ಹಿಂದೂ ಸಮಾಜಕ್ಕೆ, ರಾಷ್ಟ್ರಕ್ಕೆ ಯಾವಾಗ ತೊಂದರೆಯಾಗುತ್ತದೆ ಆ ಸಂದರ್ಭದಲ್ಲಿ ನಾವು ರಕ್ಷಣೆ ನೀಡುವ ದೃಷ್ಟಿಯಿಂದ ವಿಶ್ವ ಹಿಂದೂ ಪರಿಷತ್ ಇದೆ'' ಎಂದು ಹೇಳಿದ್ದು, ''ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಉದ್ದೇಶ ನೀವು ಹೊಂದಿದ್ದೀರಾ'' ಎಂದು ಸಂದರ್ಶಕರು ಕೇಳಿದ ವೇಳೆ, ''ಖಂಡಿತವಾಗಿಯೂ'' ಹೇಳಿದ್ದಾರೆ.
''ಹಿಂದೂ ರಾಷ್ಟ್ರದ ಕಲ್ಪನೆ ಎಂದರೆ ಯಾರೋ ಮುಸ್ಲಿಮರನ್ನು, ಅಲ್ಪಸಂಖ್ಯಾತರನ್ನು ವಿರೋಧ ಮಾಡುವುದು ಎಂದು ಅರ್ಥವಲ್ಲ. ಹಿಂದೂ ಎಂದರೆ ಜೀವನ ಪದ್ದತಿ. ಸಮಾಜದಲ್ಲಿ ಹೇಗೆ ಜೀವಿಸಬೇಕು ಎಂಬುದು ಕಲಿಸುವುದು ಹಿಂದೂ ಸಮಾಜ. ಜಗತ್ತಿಗೆ ಮಾರ್ಗದರ್ಶನ ಮಾಡಿರುವುದು ಹಿಂದೂ ಸಮಾಜ, ಹಿಂದೂ ಸಂಸ್ಕೃತಿ'' ಎಂದು ಹೇಳಿದ್ದಾರೆ.
''ಜಗತ್ತಿನಲ್ಲಿ ಯಾವುದನ್ನು ತಿನ್ನಬೇಕು ತಿನ್ನಬಾರದು ಎಂದು ತಿಳಿದಿರಲಿಲ್ಲ ಅಂತಹ ಸಂದರ್ಭದಲ್ಲಿ ನಮ್ಮ ಪೂರ್ವಜರು ಯಾವುದು ತಿನ್ನಬೇಕು, ತಿನ್ನಬಾರದು, ಯಾವುದು ಬೇಯಿಸಿ ತಿನ್ನಬೇಕು ಎಂದು ಹೇಳಿಕೊಟ್ಟಿದ್ದಾರೆ. ಜಗತ್ತಲ್ಲಿ ಬಟ್ಟೆಯೇ ಹಾಕುತ್ತಿರಲಿಲ್ಲ, ಬೆತ್ತಲೆ ಇರುತ್ತಿದ್ದರು, ಅಂತಹ ವೇಳೆ ನಾವು ಬಟ್ಟೆ ಹಾಕಿ ಜೀವಿಸಬೇಕು ಎಂದು ಹೇಳಿಕೊಟ್ಟದ್ದು ಸನಾತನ ಹಿಂದೂ ಸಮಾಜ. ಭಾರತ ಹೊರತುಪಡಿಸಿ ಬೇರೆ ಯಾವ ದೇಶದವರಿಗೂ ಸಂಬಂಧಗಳ ಬಗ್ಗೆ ಅರಿವು ಇರಲಿಲ್ಲ. ಅಂತಹ ಸಂದರ್ಭದಲ್ಲಿ ಜಗತ್ತಿಗೆ ಮಾರ್ಗದರ್ಶನ ಮಾಡಿದ್ದು ಈ ನಮ್ಮ ಹಿಂದೂ ಸಮಾಜ'' ಎಂದು ಹೇಳಿದರು.
''ನಾವು ಎಲ್ಲರನ್ನೂ ಪ್ರೀತಿ ಮಾಡಿದ್ದೇವೆ. ನಮ್ಮ ಯಾವುದೇ ಕಾರ್ಯಕ್ರಮವಿದ್ದರೂ ಅದರಲ್ಲಿ ನಾವು ಸರ್ವೇ ಜನ ಸುಖಿನೋ ಭವಂತೋ ಅಂದರೆ ಪ್ರಪಂಚದಲ್ಲಿರುವ ಎಲ್ಲರೂ ಒಳ್ಳೆದಾಗಬೇಕೆಂದು ಹೇಳುತ್ತೇವೆ. ಅದರಲ್ಲಿ ಎಲ್ಲಾ ಧರ್ಮ, ಪ್ರಾಣಿ, ಪಕ್ಷಿ, ಮರಗಿಡಗಳೂ ಸೇರುತ್ತದೆ. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಹೇಳುವ ಧರ್ಮವೇನಾದರೂ ಇದ್ದರೆ ಅದು ಹಿಂದೂ ಧರ್ಮ'' ಎಂದು ಪ್ರತಿಪಾದಿಸಿದರು.
''ನೀವು ಇದ್ದನ್ನೇ ತಿನ್ನಿ, ಇದನ್ನು ತಿನ್ನಬೇಡಿ ಎಂದು ನಾವು ಎಂದಿಗೂ ಹೇಳಿಲ್ಲ. ಇದೇ ರೀತಿ ಇರಿ ಎಂದು ನಾವು ಯಾರಿಗೂ ಈವರೆಗೂ ಹೇಳಿಲ್ಲ. ನಾವು ಈ ದೇಶ, ಸಮಾಜ ಒಳ್ಳೆಯದಾಗಬೇಕಾದರೆ ಹಿಂದೂ, ಹಿಂದೂ ರಾಷ್ಟ್ರ ಎಂಬ ಕಲ್ಪನೆ ಈ ರಾಷ್ಟ್ರದಲ್ಲಿ ಇರಬೇಕು. ಈ ರಾಷ್ಟ್ರ ಹಿಂದೂ ರಾಷ್ಟ್ರವಾಗಬೇಕು. ಅದೇ ಕಲ್ಪನೆಯಲ್ಲಿ ನಮ್ಮ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ'' ಎಂದರು.
''ಜಗತ್ತೆ ಭಾರತವನ್ನು ಒಪ್ಪುತ್ತಿದೆ. ನಮ್ಮ ಯೋಗ, ಕೃಷಿ, ಆಯುರ್ವೇದ ಮೊದಲಾದವುಗಳನ್ನು ಬೇರೆ ದೇಶಗಳು ಒಪ್ಪಿದೆ. ಇಡೀ ಜಗತ್ತು ಈಗ ಭಾರತದತ್ತ ನೋಡುತ್ತಿದೆ. ಇದಕ್ಕೆ ಕಾರಣ ನಾವು ಅಭಿವೃದ್ದಿಗೊಳ್ಳುತ್ತಿರುವುದು. ರಾಮಾಯಣ, ಮಹಾಭಾರತ ನೀಡಿದ ಸಂದೇಶವನ್ನು ಪಾಲಿಸಿ ನಾವು ಈ ದೇಶದಲ್ಲಿ ಬದುಕಬೇಕಾಗಿದೆ. ಸ್ವಾಮಿ ವಿವೇಕಾನಂದರ ಕಲ್ಪನೆಯ ಭಾರತವಾಗಬೇಕಿದೆ. ಆದ್ದರಿಂದ ನಾವು ಹಿಂದೂ ರಾಷ್ಟ್ರದ ಕಲ್ಪನೆಯನ್ನು ಇಟ್ಟುಕೊಂಡು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ'' ಎಂದು ಹೇಳಿದ್ದಾರೆ.