ಮಂಗಳೂರು, ಫೆ.04 (DaijiworldNews/HR): ಬೈಕಂಪಡಿಯಲ್ಲಿರುವ ಎಪಿಎಂಸಿಯಲ್ಲಿ ಹಣ್ಣು ಹಾಗೂ ತರಕಾರಿ ಸುಮಾರು 200ಕ್ಕೂ ಹೆಚ್ಚು ವರ್ತಕರಿಗೆ 390 ಗೋದಾಮು ಹಂಚಿಕೆಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದ್ದು, ಈ ಹಂಚಿಕೆಯಲ್ಲಿ ಲೋಪಗಳು ಆಗಿದ್ದು ವ್ಯಾಪಾರಕ್ಕೆ ಯೋಗ್ಯವಲ್ಲದ ಗೋದಾಮುಗಳನ್ನು ಹಂಚಿಕೆ ಮಾಡಿರುವುದು ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಿಟ್ಟಿರುವ ಗೋದಾಮುಗಳನ್ನು ನಿಯಮ ಬಾಹಿರವಾಗಿ ಸಾಮಾನ್ಯ ವರ್ಗದ ಬಲಾಡ್ಯ ವರ್ತಕರಿಗೆ ಹಂಚಿಕೆ ಮಾಡಿರುವುದು, ಕಾರ್ನರ್ ಅಂಗಡಿಗಳನ್ನು ಹರಾಜಿಗೆ ಇಡದೆ ಇದ್ದು ನೇರವಾಗಿ ಹಂಚಿಕೆ ಮಾಡಿರುವ ಮಂಗಳೂರು ಎಪಿಎಂಸಿ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಮಂಗಳೂರು ಎಪಿಎಂಸಿ ವರ್ತಕರ ಸಂಘ ಹೈಕೋರ್ಟ್ನಲ್ಲಿ ದೂರು ಸಲ್ಲಿಸಿ ಗೋದಾಮು ಹಂಚಿಕೆ ಪ್ರಕ್ರಿಯೆಗೆ ತಡೆಯಾಜ್ಞೆ ಕೋರಿದ್ದು, ಅರ್ಜಿದಾರರ ದೂರು ಪರಿಶೀಲಿಸಿದ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಎಪಿಎಂಸಿ ಅಧಿಕಾರಿಗಳ ಲೋಪವನ್ನು ಗುರುತಿಸಿ ಗೋದಾಮು ಹಂಚಿಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಆದೇಶ ನೀಡಿದ್ದಾರೆ.

ಎಪಿಎಂಸಿಯ ಸುಮಾರು 170ಕ್ಕೂ ಅಧಿಕ ವರ್ತಕರು ಡಿಡಿ ಪಾವತಿಸದೆ ಗೋದಾಮು ಹಂಚಿಕೆ ಪ್ರಕ್ರಿಯೆಯನ್ನು ವಿರೋಧಿಸಿ ಹಂಚಿಕೆ ಪ್ರಕ್ರಿಯೆಯ ವಿರುದ್ಧ ಕಾನೂನು ಹೋರಾಟ ನಡೆಸುವ ತೀರ್ಮಾನ ಕೈಗೊಂಡಿದ್ದರು ಎನ್ನಲಾಗಿದೆ.
ಇನ್ನು "ಗೋದಾಮು ಹಂಚಿಕೆ ಪ್ರಕ್ರಿಯೆಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ ತೀರ್ಪನ್ನು ಮಂಗಳೂರು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷರಾದ ಭರತ್ ರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಬಿ ಕೆ ಇಮ್ತಿಯಾಝ್ ಸ್ವಾಗತಿಸಿದ್ದು ವರ್ತಕರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ" ಎಂದು ಹೇಳಿದ್ದಾರೆ.