ಉಡುಪಿ, ಫೆ.04 (DaijiworldNews/PY): ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭ ಸ್ಥಳದಿಂದ ತಪ್ಪಿಸಿಕೊಂಡಿದ್ದ ಅರೋಪಿಗೆ ಶಿಕ್ಷೆ ವಿಧಿಸಲಾಗಿದೆ.

ಆರೋಪಿಯನ್ನು ಹನುಮಂತ ಬಸಪ್ಪ ಕಂಬಳಿ ಎಂದು ಗುರುತಿಸಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಾಗಿದ್ದ ಹನುಮಂತ ಬಸಪ್ಪ ಕಂಬಳಿ ಅವರನ್ನು 2019ರ ಮಾರ್ಚ್ ತಿಂಗಳಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಆತನನ್ನು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಜಿಲ್ಲಾ ಕಾರಾಗೃಹದ ಬಳಿ ವಾಹನ ನಿಧಾನವಾದಾಗ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ದೂಡಿ ಹಾಕಿ ಸ್ಥಳದಿಂದ ಓಡಿ ಹೋಗಿ ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಂಡ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿಯ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷಿತ ಪೂರಕ ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಇರ್ಫಾನ್ ಅವರು ಆರೋಪಿ ಹನುಮಂತ ಬಸಪ್ಪ ಕಂಬಳಿಗೆ 2 ವರ್ಷಗಳ ಕಾಲ ಶಿಕ್ಷೆ ವಿಧಿಸಿ, ಫೆಬ್ರವರಿ 2 ರಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬದರೀನಾಥ್ ನಾಯರಿ ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದಾರೆ.