ಉಡುಪಿ,ಫೆ.05 (DaijiworldNews/HR): ಉದ್ಯಾವರದ ನಾಟ್ಯಮಯೂರಿ ಖ್ಯಾತಿಯ ತನುಶ್ರೀ ಪಿತ್ರೋಡಿ ಈಗಾಗಲೇ 5 ವಿಶ್ವ ದಾಖಲೆ ಮಾಡಿದ್ದು, ಇದೀಗ 6ನೇ ವಿಶ್ವದಾಖಲೆಗೆ ಸಜ್ಜಾಗಿದ್ದಾಳೆ ಎಂದು ತನುಶ್ರೀ ಅವರ ತಂದೆ ಉದಯ್ ಕುಮಾರ್ ಹೇಳಿದ್ದಾರೆ.



ಉಡುಪಿ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಜ.6ರಂದು ಸಂಜೆ 4.30ಕ್ಕೆ ಉಡುಪಿಯ ಸೈಂಟ್ ಸಿಸಿಲಿಸ್ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ ‘ಮೋಸ್ಟ್ ಬ್ಯಾಕ್ವರ್ಡ್ಸ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್’ ವಿಭಾಗದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾಳೆ" ಎಂದರು.
"ತನುಶ್ರೀ ಅವರು ಒಂದು ನಿಮಿಷದಲ್ಲಿ 48 ಬಾರಿ ದೇಹವನ್ನು ಸಂಪೂರ್ಣವಾಗಿ ಹಿಂದಕ್ಕೆ ಬಾಗಲು ಪ್ರಯತ್ನಿಸುತ್ತಿದ್ದು, ಈ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಲು ಸ್ವತಃ ತಯಾರಿ ನಡೆಸುತ್ತಿದ್ದಾರೆ" ಎಂದು ಹೇಳಿದರು.
ಇನ್ನು ಆಕೆ ರಾಧಾಕೃಷ್ಣ ಕೊಡಂಚ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾಳೆ ಮತ್ತು ಆದಿತ್ಯ ಅಂಬಲ್ಪಾಡಿ ಅವರಿಂದ ಯಕ್ಷಗಾನದಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ತನುಶ್ರೀ ಉಡುಪಿಯ ಬಹುಮುಖ ಪ್ರತಿಭಾನ್ವಿತ ಹುಡುಗಿ, ತನ್ನ ಚಿಕ್ಕ ವಯಸ್ಸಿನಲ್ಲಿ ಐದು ವಿಶ್ವ ದಾಖಲೆಗಳನ್ನು ಮಾಡಿದ್ದು, ಯೋಗ ಪ್ರದರ್ಶನದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಆಕೆಗೆ ಯೋಗ ರತ್ನವನ್ನು ಕೂಡ ನೀಡಲಾಯಿತು ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು ಮಾಡಿದ ಅದ್ಭುತ ಸಾಧನೆಗಳಿಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.
ಫೆ.23, 2019ರಲ್ಲಿ ಉಡುಪಿಯ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ ‘ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಭಂಗಿಯಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಒಂದು ಬಾರಿ ಎರಡು ದಾಖಲೆಗಳನ್ನು ರಚಿಸಿದ ತನುಶ್ರೀ ಫೆ.22, 2020ರಲ್ಲಿ ಉದ್ಯಾವರ ಗ್ರಾಮ ಪಂಚಾಯಿತಿ ಮೈದಾನದಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀ ಅಂತರವನ್ನು 1 ನಿಮಿಷ 14 ಸೆಕೆಂಡ್ನಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಾಳೆ.
2018 ರಲ್ಲಿ ಇಟಲಿಯಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ತನುಶ್ರೀ ಭಾಗವಹಿಸಿದ್ದು, ಯೋಗ ಕ್ಷೇತ್ರದಲ್ಲಿ ಅವರು ಮಾಡಿದ ಅದ್ಭುತ ಸಾಧನೆಗಳನ್ನು 152 ವಿವಿಧ ಸಂಸ್ಥೆಗಳು ಈವರೆಗೆ ಗುರುತಿಸಿ ಗೌರವಿಸಿವೆ.
ತನುಶ್ರೀ ಉದಯ್ ಕುಮಾರ್ ಮತ್ತು ಸಂಧ್ಯಾ ಅವರ ಹೆಮ್ಮೆಯ ಮಗಳಾಗಿದ್ದು, ಉಡುಪಿಯ ಸೈಂಟ್ ಸೆಸಿಲಿಯ ಕನ್ನಡ ಮಧ್ಯಮ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಪತ್ರಿಕಾಗೋಷ್ಠಿಯಲ್ಲಿ ಸುರಭಿ ರತನ್, ವಿಜಯ್ ಕೋಟ್ಯಾನ್ ಪಿತ್ರೋಡಿ ಮತ್ತು ರವೀಂದ್ರ ಶೆರಿಗರ್ ಉಪಸ್ಥಿತರಿದ್ದರು.