ಕಾಸರಗೋಡು, ಫೆ.05 (DaijiworldNews/PY): ಎಂಡೋ ಸಲ್ಪಾನ್ ಸಂತ್ರಸ್ತರ ಬದುಕಿಗೆ ಬೆಳಕಾಗಿಸುವ ನಿಟ್ಟಿನಲ್ಲಿ ಕೋಟ್ಯಾಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಮನೆಗಳು ಸಂತ್ರಸ್ತರಿಗೆ ಹಸ್ತಾಂತರವಾಗದೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಇದರಿಂದ 59 ಮನೆಗಳು ಫಲಾನುಭವಿಗಳಿಗೆ ಹಸ್ತಾಂತರಗೊಳ್ಳದೆ ಮೂಲೆ ಸೇರಿದೆ.

ಸಾಂದರ್ಭಿಕ ಚಿತ್ರ
ಸಂತ್ರಸ್ಥರ ದುರವಸ್ಥೆಯನ್ನು ಮನಗಂಡು ತಿರುವನಂತಪುರದ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ 81 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಎಣ್ಮಕಜೆಯ ಬಜಕೂಡ್ಲುವನಲ್ಲಿ 36 ಹಾಗೂ ಮತ್ತು ಪೆರಿಯಕಾಟುಮುಂಡದಲ್ಲಿ 45 ಮನೆಗಳನ್ನು ನಿರ್ಮಿಸಲಾಗಿದೆ.
ಈ ಪೈಕಿ ಪೆರಿಯದ 45 ಮನೆಗಳಲ್ಲಿ 22 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ 23 ಮನೆಗಳು ಹಾಗೆಯೇ ಉಳಿದುಕೊಂಡಿದೆ.
ಬಜಕೂಡ್ಲುವಿನಲ್ಲಿ ನಿರ್ಮಿಸಿರುವ 36 ಮನೆಗಳು ಫಲಾನುಭವಿಗಳಿಗೆ ಹಸ್ತಾಂತರಿಸಿಲ್ಲ. ರಾಜ್ಯ ಸರಕಾರದ ನಿರ್ಲಕ್ಷ ಹಾಗೂ ಜಿಲ್ಲಾಡಳಿತ ಮುತುವರ್ಜಿ ವಹಿಸದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಬಜಕೂಡ್ಲುವಿನಲ್ಲಿ ಮನೆ ನಿರ್ಮಿಸಿ ಮೂರು ವರ್ಷ ಕಳೆದಿವೆ. ಮನೆಗಳನ್ನು ನಿರ್ಮಿಸಿದ್ದು ಬಿಟ್ಟರೆ ಈ ಪ್ರದೇಶಕ್ಕೆ ತೆರಳಲು ಸೂಕ್ತ ರಸ್ತೆ ನಿರ್ಮಿಸಿಲ್ಲ. ಖಾಸಗಿ ವ್ಯಕ್ತಿಯೋರ್ವರ ಸ್ಥಳದ ಮೂಲಕ ತೆರಳಬೇಕಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ವಸತಿ ಸಮುಚ್ಚಯದ ಪರಿಸರದಲ್ಲಿ ತೆರೆದ ಸಭಾಂಗಣ, ಮಕ್ಕಳ ಆಟದ ಪಾರ್ಕ್ ಮೊದಲಾದ ಯೋಜನೆಗಳನ್ನು ನಿರ್ಮಿಸಬೇಕಿತ್ತು. 50 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಇನ್ನೂ ನಡೆದಿಲ್ಲ.
ದಾನಿಗಳ ಮೂಲಕ ಕೋಟ್ಯಂತರ ರೂ. ವೆಚ್ಚ ಮಾಡಿ ಮನೆಗಳನ್ನು ನಿರ್ಮಿಸಿದರೂ ಅದನ್ನು ಫಲಾನುಭವಿಗಳಿಗೆ ಹಸ್ತಾಂತರಿಸದಿರುವುದು ಸಂತ್ರಸ್ತರ ಬಗ್ಗೆ ಅಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ.