ಉಡುಪಿ, ಜು ೧೦: ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ವಿನೂತನವಾಗಿ ಪ್ರತಿಭಟನೆ ನಡೆಸಿ ತಮ್ಮ ಅಸಮಾಧನ ವ್ಯಕ್ತಪಡಿಸಿದ್ದಾರೆ. ಉಡುಪಿಯ ಹಳೆ ಡಯಾನ ಸರ್ಕರ್ಲ್ನಿಂದ ಚಿತ್ತರಂಜನ್ ಸರ್ಕಲ್ನವರೆಗೆ ಎತ್ತಿನಗಾಡಿ ಹಾಗೂ ಸೈಕಲ್ ಬಳಕೆ ಮಾಡುವ ಮೂಲಕ ಸಮಿಶ್ರ ಸರಕಾರದ ಬೆಲೆ ಏರಿಕೆಯ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.
ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಇಂಧನ ಬೆಲೆ ಏರಿಕೆ ಮಾಡಿದಾಗ ಟೀಕೆ ಮಾಡುತ್ತಿದ್ದ ಈ 2 ಪಕ್ಷಗಳು ಈಗ ಇಂಧನದ ಬೆಲೆ ಏರಿಕೆ ಮಾಡಿದೆ. ಬುದ್ಧಿವಂತರ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಉಡುಪಿ ಜಿಲ್ಲೆಗೆ ಬಜೆಟ್ನಲ್ಲಿ ಯಾವುದೇ ಘೋಷಣೆ ಮಾಡದೆ ಸಮಿಶ್ರ ಸರಕಾರ ಮಲತಾಯಿ ಧೋರಣೆ ತಾಳಿದೆ. ವಿದ್ಯುತ್ ಶಕ್ತಿಯ ಬೆಲೆ ಇಗಾಗಲೇ ಗಗನಕ್ಕೆ ಏರಿಕೆಯಾಗಿದ್ದು ಗಾಯದ ಮೇಲೆ ಉಪ್ಪು ಸುರಿದಂತೆ ಮತ್ತೆ ವಿದ್ಯುತ್ ದರವನ್ನು ಏರಿಕೆ ಮಾಡಿದೆ. ಸರಕಾರ ಈ ಕೂಡಲೇ ತನ್ನ ನಿರ್ಧಾರದಿಂದ ದೂರ ಸರಿಯಬೇಕು. ಉಡುಪಿ ಜಿಲ್ಲೆಗೆ ವಿಶೇಷ ಯೋಜನೆಯನ್ನು ಬಜೆಟ್ನಲ್ಲಿ ಮರು ಸೇರ್ಪಡಿಸಬೇಕು. ಇಂಧನ ಮತ್ತು ವಿದ್ಯುತ್ ಬೆಲೆ ಏರಿಕೆಯನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು. ಸಮಾಜ ಸೇವಕ ತಾರನಾಥ ಮೇಸ್ತಾ ಹಾಗೂ ರಿಕ್ಷಾ ಚಾಲಕರು ಪ್ರತಿಭಟನೆಗೆ ಸಾಥ್ ನೀಡಿದ್ದರು.