ಮಂಗಳೂರು, ಫೆ.05 (DaijiworldNews/PY): "ಕೇಂದ್ರದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀಮಂತರ ಜೇಬನ್ನು ತುಂಬಲು ಬಡವರನ್ನು ಲೂಟಿ ಮಾಡುತ್ತಿದೆ" ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಅಭಿವೃದ್ಧಿಯ ಬದಲಾಗಿ ಜನರಲ್ಲಿ ಮತೀಯ ಭಾವನೆಗಳನ್ನು ಬಿತ್ತುವ ಮೂಲಕ ಅಧಿಕಾರಕ್ಕೇರಿದ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ" ಎಂದು ಕಿಡಿಕಾರಿದ್ದಾರೆ.
"ಇನ್ನು ಬಿಜೆಪಿ ಪರವಾಗಿ ಮಾತನಾಡಿದವರು ಮಾತ್ರ ದೇಶಪ್ರೇಮಿಗಳು ಹಾಗೂ ವಿರುದ್ಧವಾಗಿ ಮಾತನಾಡಿದವರನ್ನು ದೇಶದ್ರೋಹಿಗಳು ಎಂಬಂತೆ ಕೇಂದ್ರ ಸರಕಾರ ಬಿಂಬಿಸುತ್ತಿದ್ದು, ಈ ಬೆಳವಣಿಗೆಯು ಒಳ್ಳೆಯದಲ್ಲ. ಬಿಜೆಪಿಯು ಜನಸಾಮಾನ್ಯರ ಹಿತ ಕಾಪಾಡುವ ಬದಲು ನಾಲ್ಕೈದು ಬಂಡವಾಳ ಶಾಹಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ" ಎಂದರು.
"ರೈತರು ಕಳೆದ 72 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಬದಲಾಗಿ ರೈತರನ್ನು ಅವಮಾನಿಸುತ್ತಿದೆ. ರೈತರ ಪರವಾಗಿ ಧ್ಬನಿ ಎತ್ತುವವರ ವಿರುದ್ಧ ಪ್ರಕರಣ ದಾಖಲಿಸಿ ಅನ್ಯಾಯ ಎಸಗುತ್ತಿದೆ" ಎಂದಿದ್ದಾರೆ.
"ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಜನ ಸಂಘ ಉದ್ಯಮಿಗಳ ಪಕ್ಷವಾಗಿತ್ತು. ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರವು ಕೇವಲ 12 ಸುತ್ತಿನ ಸಭೆಗಳನ್ನು ಮಾತ್ರ ನಡೆಸಿದೆ. ಸರ್ಕಾರವು, ತಾರ್ಕಿಕ ತೀರ್ಮಾನಕ್ಕೆ ಬರಲು ವಿಫಲವಾಗಿದೆ. ಬಿಜೆಪಿ ಸರ್ಕಾರ ಅಚಲ ಮತ್ತು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ" ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ದೇಶಗಳು 50 ರೂ.ಗಿಂತ ಕಡಿಮೆ ವೆಚ್ಚದಲ್ಲಿ ಇಂಧನವನ್ನು ಒದಗಿಸುತ್ತಿವೆ. ಬಿಜೆಪಿಯ ಇಂಧನ ಬೆಲೆ ಏರಿಕೆ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿದೆ" ಎಂದು ಕಿಡಿಕಾರಿದ್ದಾರೆ.
ಅಲ್ಲದೆ, ಸಬ್ಸಿಡಿ ಹೆಚ್ಚಳ ಮತ್ತು ಅಡುಗೆ ಅನಿಲದ ಬೆಲೆಯ ಬಗ್ಗೆ ಸರ್ಕಾರ ಮೌನವಾಗಿರುವ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
"ಕೇಂದ್ರ ಸರ್ಕಾರ ಅಂತರ್ಜಾಲ ಸಂಪರ್ಕ ಕಡಿತಗೊಳಿಸಿದ್ದರಿಂದ, ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. 15 ಸಂಸದರಿಗೆ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಸರ್ಕಾರವು ರೈತರನ್ನು ಅವಮಾನಿಸುತ್ತಿದೆ ಅವರನ್ನು ಮಾವೋವಾದಿಗಳು, ಭಯೋತ್ಪಾದಕರು ಮತ್ತು ಖಲಿಸ್ತಾನಿಗಳು ಎಂದು ಕರೆದು ಅವಮಾನಿಸುತ್ತಿದ್ದಾರೆ" ಎಂದಿದ್ದಾರೆ.
"ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದರೂ ಕೂಡಾ ಅದು ಹಿಂದುಳಿದ ವರ್ಗದವರಿಗೆ ಅಥವಾ ಬಡವರಿಗೆ ಹಾನಿ ಮಾಡಿಲ್ಲ. ಸರ್ವಾಧಿಕಾರದ ಮೂಲಕ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬ್ಯಾಂಕ್ಗಳ ಖಾಸಗೀಕರಣವು ದೇಶದ ಆರ್ಥಿಕತೆಗೆ ಅಪಾಯದ ಸೂಚಕವಾಗಿದೆ" ಎಂದಿದ್ದಾರೆ.
ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯ್ಲಿ, ಮನಪಾ ಪ್ರತಿಪಕ್ಷದ ನಾಯಕ ಅಬ್ದುಲ್ ರವೂಫ್, ದ.ಕ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಕಾರ್ಪೊರೇಟರ್ ಅಪ್ಪಿ, ಕಾರ್ಪೊರೇಟರ್ ನವೀನ್ ಡಿಸೋಜ, ಶಾಹುಲ್ ಹಮೀದ್, ಟಿ.ಕೆ.ಸುಧೀರ್, ಪೃಥ್ವಿರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.