ಉಡುಪಿ, ಫೆ.05 (DaijiworldNews/PY): ಉಡುಪಿ ನಗರಸಭೆ ಮತ್ತು ಪ್ರಾಧಿಕಾರದ ವ್ಯಾಪ್ತಿಯ ಮನೆ ನಿವೇಶನ ಸಂತ್ರಸ್ತರು ಶುಕ್ರವಾರ ತಮ್ಮ ಭೂಮಿಯ ಹಕ್ಕನ್ನು ಕೊಡುವಂತೆ ಆಗ್ರಹಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.









ಈ ಸಂದರ್ಭ ಮಾತನಾಡಿದ ತಾರಾನಾಥ್, "ಸುಮಾರು 20 ವರ್ಷಗಳ ಹಿಂದೆ ಉಡುಪಿ ನಗರಸಭೆ ಮತ್ತು ಪ್ರಾಧಿಕಾರದ ವ್ಯಾಪ್ತಿಯ ಮನೆ ನಿವೇಶನಗಳನ್ನು ಪಡೆದುಕೊಂಡಿದ್ದರು. ಆದರೆ, ಇದೀಗ ಕಾನೂನು ತೊಡಕಿನಿಂದಾಗಿ ಅಲ್ಲಿ ಯಾವುದೇ ವಸತಿ ಮಾಡಲು ಬಿಡುತ್ತಿಲ್ಲ. ಈಗ ಕಂದಾಯ ಇಲಾಖೆ, ನಿಮ್ಮಿಂದ ಅಕ್ರಮವಾಗಿದೆ, ದಂಡಕಟ್ಟಿ ನಿಯಮಾನುಸಾರ ಸಮುದಾಯದ ಉಪಯೋಗಕ್ಕೆ ಜಾಗ ಒಪ್ಪಿಸಿ ಸಕ್ರಮ ಮಾಡಿಕೊಳ್ಳಿ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ತಾಕೀತು ಮಾಡಿ ನಮ್ಮಿಂದ ಅಕ್ರಮ-ಸಕ್ರಮಕ್ಕೆ ಅರ್ಜಿ ಸ್ವೀಕರಿಸಿದ್ದಾರೆ. ಅಕ್ರಮ-ಸಕ್ರಮದ ಬಗ್ಗೆ ಇನ್ನು ಕೂಡ ಸೂಕ್ತ ನಿರ್ಣಯ ಬಂದಿಲ್ಲ. ಅದು ಹೈ ಕೋರ್ಟ್ನಲ್ಲಿದೆ. ಈ ಮೂಲಕ ಈ ವ್ಯಾಜ್ಯ ನ್ಯಾಯಾಲಯದಲ್ಲಿ ಆದಷ್ಟು ಬೇಗ ಪರಿಹಾರ ಆಗಿ ನಮಗೆ ನ್ಯಾಯ ಸಿಗಬೇಕಾಗಿದೆ" ಎಂದು ಹೇಳಿದರು.
ಪ್ರಕರಣ ಹಿನ್ನೆಲೆಯ ಬಗ್ಗೆ ವಿವರ, 1990 ಮತ್ತು 2000 ದಶಕದಲ್ಲಿ ಉಡುಪಿ ನಗರಸಭೆ ಮತ್ತು ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವರು ಕೃಷಿ ಭೂಮಿ ಹಿಡುವಳಿಗಳನ್ನು ಖರೀದಿಸಿ, ಭೂಪರಿವರ್ತನೆ ಮಾಡಿ, ವಸತಿ ಬಡಾವಣೆಗಳನ್ನಾಗಿ ಮಾರ್ಪಡಿಸಿದರು. ಆ ಸಮಯದಲ್ಲಿ ಅವರಿಂದ ನೇರವಾಗಿ ಅಥವಾ ಅವರಿಂದ ಖರೀದಿಸಿದವರಿಂದ ಖರೀದಿಸಿದರು. ಆ ರೀತಿಯಲ್ಲಿ ಭೂಪರಿವರ್ತನೆ ಮಾಡುವಾಗ ವಸತಿ ಬಡಾವಣೆಗಳಲ್ಲಿ ಸಮುದಾಯದ ಉಪಯೋಗಕ್ಕೆ ಎಷ್ಟೆಷ್ಟು ಜಾಗವನ್ನು ಹೇಗೆ ಗುರುತಿಸಿ, ಮೀಸಲಿಡಬೇಕೆಂಬ ನಿಯಮಗಳು ಆ ಮೊದಲೇ ಇದ್ದರೂ ಮತ್ತು ಅವುಗಳನ್ನು ಕರ್ನಾಟಕ ಸರಕಾರ 1984ರಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಿದರೂ, ಆಗ ಉಡುಪಿಯಲ್ಲಿ ಅವೆಲ್ಲವನ್ನೂ ಅಮಾನತು ಮಾಡಿ, ಅವುಗಳನ್ನು ಪಾಲಿಸದೆ ಬಡಾವಣೆಗಳನ್ನು ರೂಪಿಸಿ, ನಿವೇಶನಗಳನ್ನು ಮಾಡಿ ಮಾರಲು ಅನುವು ಮಾಡಿಕೊಡಲಾಯಿತು. ಯಾವ ತೊಡಕೂ ಇಲ್ಲದೇ ನಿವೇಶನಗಳು ಅವರವರ ಹೆಸರಿಗೆ ನೋಂದಣಿ ಆದ ಕಾರಣ ಸಮಸ್ಯೆ ಇರುವುದು ಅರಿವಿಗೆ ಬರಲಿಲ್ಲ ಮತ್ತು ಬಡಾವಣೆಗಳು ನಿಯಮಬದ್ಧವಾಗಿವೆ ಎಂದು ತಿಳಿದುಕೊಂಡಿದ್ದರು . ಈಗ ಆ ಜಾಗದಲ್ಲಿ ಮನೆಕಟ್ಟಲು ಪ್ರಾರಂಭಿಸಿದಾಗ ಕಂದಾಯ ಇಲಾಖೆ -ಆಕ್ಷೇಪ ಎತ್ತುತ್ತಿದೆ.
ಈ ಸಂದರ್ಭದಲ್ಲಿ ಸಂತ್ರಸ್ತರು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇವರಿಗೆ ಮನವಿ ಹಸ್ತಾಂತರ ಮಾಡಿದರು.
ದೇವು ಹನೆಹಳ್ಳಿ, ಡಾ ಕಮಲೇಶ್, ರಾಬರ್ಟ್ ಡಿಸೋಜ, ವಾಸುದೇವ್ ಗಡಿಯಾರ್, ಸುಂದರ್ ಶೆಟ್ಟಿ, ಮೆಲ್ವಿನ್ ರೇಗೊ ಮುಂತಾದವರು ಉಪಸ್ಥಿತರಿದ್ದರು.