ಮಂಗಳೂರು, ಫೆ. 05 (DaijiworldNews/SM): ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಸಿಸಿಬಿ ಪೊಲೀಸರು ವಶ ಪಡೆಸಿಕೊಂಡಿರುವ ದುಬಾರಿ ಐಷಾರಮಿ ಕಾರುಗಳನ್ನು ಮಾರಾಟ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಸಮಗ್ರ ವರದಿಯನ್ನು ನೀಡುವಂತೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿಯವರು ಮಂಗಳೂರು ಕಮಿಷನರ್ ಅವರಿಗೆ ಸೂಚಿಸಿದ್ದಾರೆ.

ದುಬಾರಿ ಕಾರುಗಳನ್ನು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೈಜಿವರ್ಲ್ಡ್ ಸೇರಿದಂತೆ ಅನೇಕ ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳ ವರದಿಯನ್ನು ಗಮನಿಸಿದ್ದೇನೆ ಎಂದಿರುವ ಮಹಾ ನಿರ್ದೇಶಕರು, ಪ್ರಕರಣದ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಮಂಗಳೂರು ಕಮಿಷನರ್ ಅವರಿಂದ ವರದಿ ಕೇಳಿದ್ದೇನೆ ಎಂಬುವುದಾಗಿ ಮಾಧ್ಯಮಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಶಿಘ್ರದಲ್ಲೇ ತನಿಖಾ ವರದಿ ಕೈ ಸೇರುವ ಸಾಧ್ಯತೆ ಇದೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿವುದೆಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಹಿನ್ನೆಲೆಯಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ಈಗಾಗಲೇ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶಿಘ್ರದಲ್ಲೇ ವರದಿಯನ್ನು ಕಮಿಷನರ್ ಮೂಲಕ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಹಸ್ತಾಂತರಗೊಳ್ಳುವ ಸಾಧ್ಯತೆ ಇದೆ.