ಕಾಸರಗೋಡು, ಜು 10: ಕಾಸರಗೋಡಿನ ಕಯ್ಯಾರು ಪರಂಬಳ-ಜೋಡುಕಲ್ಲು ರಸ್ತೆಯ ದುಸ್ಥಿತಿಯನ್ನು ಖಂಡಿಸಿ ನಾಗರಿಕ ಹೋರಾಟ ಸಮಿತಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತು. ಕಯ್ಯಾರು ಡೋನ್ ಬೋಸ್ಕೊ ಪರಂಬಳ ಸ್ಟೋರ್ ಪರಿಸರದಿಂದ ಮೆರವಣಿಗೆ ಮೂಲಕ ತೆರಳಿದ ನೂರಾರು ಮಂದಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಗೆ ಹಾಗೂ ಬಳಿಕ ನಡೆದ ಪ್ರತಿಭಟನೆಗೆ ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಧರ್ಮಗುರು ಫಾದರ್ ವಿಕ್ಟರ್ ಡಿ ಸೋಜ ಚಾಲನೆ ನೀಡಿದರು.
ವ್ಯಾಪಾರಿಗಳು ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ನೀಡಿದರು. ಆಟೋ- ಟ್ಯಾಕ್ಷಿ, ಇತರ ವಾಹನ ಮಾಲಕರು, ಕಾರ್ಮಿಕರು, ವಿವಿಧ ಸಂಘಟನೆಗಳು, ಧಾರ್ಮಿಕ ಮುಖಂಡರು, ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ರಸ್ತೆ ಅವ್ಯವಸ್ಥೆ ಬಗ್ಗೆ ಸಚಿವರು, ಸಂಸದ, ಶಾಸಕರು, ಅಧಿಕಾರಿ ಹಾಗೂ ಇತರ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದರೂ, ಸಂಬಂಧಪಟ್ಟವರು ಮಾತ್ರ ಇದುವರೆಗೂ ದುರಸ್ತಿಗೆ ಮುಂದಾಗಿಲ್ಲ. ರಸ್ತೆಯಲ್ಲಿ ವಾಹನ ಸಂಚಾರ ಕಷ್ಟ ಸಾಧ್ಯವಾಗಿದ್ದು ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದೆ. ಶಾಲೆ, ಮಸೀದಿ , ದೇವಸ್ಥಾನ, ಚರ್ಚ್, ಅಂಗನವಾಡಿ, ಗ್ರಾಮ ಪಂಚಾಯತ್ ಕಚೇರಿ ಹಾಗೂ ಇತರ ಸಂಸ್ಥೆಗಳು ಇದ್ದು ದಿನಂಪ್ರತಿ ಸಾವಿರಾರು ಮಂದಿ ತೆರಳುವ ಈ ರಸ್ತೆಯ ಕುರಿತ ನಿರ್ಲಕ್ಷ ತೋರಿರುವುದಕ್ಕೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.