ಉಡುಪಿ, ಫೆ.06 (DaijiworldNews/PY): ಉಡುಪಿಯ ರಾಗ ಧನ ಸಂಸ್ಥೆಯ ಆಶ್ರಯದಲ್ಲಿ 33ನೇ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಆರಂಭವಾಗಿದೆ. ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ಉತ್ಸವದ ಉದ್ಘಾಟನೆ ನಡೆಯಿತು.




ನಾಡೋಜ ಕೆ.ಪಿ.ರಾವ್, ಸಂಗೀತೋತ್ಸವ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, "ತ್ಯಾಗರಾಜರು ಹಾಡುವ ಸಂತರಾದರೆ, ಪುರಂದರ ದಾಸರು ಮಾತುಗಳೇ ಹಾಡಾಗುವಷ್ಟು ಸಮರ್ಥವಾಗಿದ್ದವು. ಇವರ ಬಗ್ಗೆ ತಿಳಿಯಲು ಪ್ರಯತ್ನಿಸಿದಷ್ಟೂ ನಮ್ಮ ಕುತೂಹಲ ಮತ್ತು ಜ್ಞಾನ ವಿಸ್ತರಿಸುತ್ತೇವೆ. ನಮ್ಮಲ್ಲಿಯೂ ಸಂಗೀತದ ವಾತಾವರಣ ಮತ್ತಷ್ಟು ತೆರೆದುಕೊಳ್ಳಲಿ" ಎಂದು ಶುಭಹಾರೈಸಿದರು.
ಹಿರಿಯ ಕಲಾವಿದೆ ವಸಂತಿ ರಾಮಭಟ್ ಮಾತನಾಡಿದರು. ರಾಗಧನ ಸಂಸ್ಥೆಯ ಅಧ್ಯಕ್ಷ ಡಾ.ಶ್ರೀಕಿರಣ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯದರ್ಶಿ ಉಮಾಶಂಕರಿ ಟಿ.ಕೆ ಸ್ವಾಗತಿಸಿದರು. ಕೋಶಾಧಿಕಾರಿ ಸದಾಶಿವ ರಾವ್ ವಂದಿಸಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಪಿಳ್ಳಾರಿ ಗೀತೆಗಳು ಹಾಗೂ ಶ್ರೀ ತ್ಯಾಗರಾಜರ ಪಂಚರತ್ನ ಗೋಷ್ಠಿ ಗಾಯನ ನಡೆಯಿತು. ಶನಿವಾರ ಹಾಗೂ ರವಿವಾರವೂ ಸಂಗೀತೋತ್ಸವ ನಡೆಯಲಿದೆ.