ಉಡುಪಿ, ಫೆ.06 (DaijiworldNews/PY): "ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಖಾಸಗಿಯಾಗಿ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳಿಸಲು ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ನಡೆಸಲು ಸರ್ಕಾರದಿಂದ ಅನುಮೋದನೆ ಪಡೆಯಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದರೂ ಅನುಮೋದನೆ ನೀಡದೇ ಇರುವ ಬಗ್ಗೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಚರ್ಚಿಸಿದರು.


ಏಳು ದಿನಗಳ ಕಾಲ ನಡೆದ ವಿಧಾನಸಭೆ ಅಧಿವೇಶನ ಶುಕ್ರವಾರ ಫೆ. 5ರಂದು ಮುಕ್ತಾಯಗೊಂಡಿತು.
ಶಾಸಕ ರಘುಪತಿ ಭಟ್ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, "ಯೋಜನೆಗೆ ಸಂಬಂಧಿಸಿದ ಡಿಪಿಆರ್ ಪರಿಶೀಲಿಸಲಾಗಿದೆ. ಯೋಜನೆಯಿಂದ ಆಗಬಹುದಾದ ಆರ್ಥಿಕ ಪರಿಣಾಮ, ಆದಾಯದ ಮೂಲ, ಒಟ್ಟು ಖರ್ಚು ವೆಚ್ಚ, ಸಹಿತ ವಿವಿಧ ವಿಷಯಗಳ ಕುರಿತು ಇನ್ನಷ್ಟು ಸ್ಪಷ್ಟತೆ ಅಗತ್ಯವಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಪುನರ್ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿ ಬಂದ ಕೂಡಲೇ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಿದ್ದೇವೆ" ಎಂದು ಹೇಳಿದರು.
ಉಡುಪಿ ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸರಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇರದೆ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಶಾಸಕರ ಹಾಗೂ ಸಚಿವರ ನೇತೃತ್ವದಲ್ಲಿ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ ನಿರ್ಣಯಿಸಿ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಮನವಿ ಮಾಡಿದರು.
"ಉಡುಪಿಯಲ್ಲಿ ಪ್ರಾಯೋಗಿಕ ವಾಗಿ ಸ್ಮಾರ್ಟ್ ಸಿಟಿ ಮಾಡಲು ಭೋಪಾಲ್ ಮತ್ತು ಭುವನೇಶ್ವರಕ್ಕೆ ಹೋಗಿದ್ದು, ಭೋಪಾಲ್ ಮಾದರಿಯಲ್ಲಿ ಡಿಜಿಟಲ್ ಸ್ಮಾರ್ಟ್ ಪೋಲ್ಸ್ ಅನ್ನು ಉಡುಪಿ, ಮಲ್ಪೆ ಮತ್ತು ಮಣಿಪಾಲದಲ್ಲಿ ಅಳವಡಿಸುವ ಯೋಜನೆ ಬಗ್ಗೆ ಒಂದು ವರ್ಷದಿಂದ ಅಧ್ಯಯನ ಮಾಡಿದ್ದೇವೆ. ಹಾಗಾಗಿ ಸರಕಾರದ ಅನುದಾನವಿಲ್ಲದೆ ಮಾಡುವ ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ಸಿಗಬೇಕಿದೆ" ಎಂದು ಸಭೆಯಲ್ಲಿ ಮನವಿ ಮಾಡಿದರು .