ಕಾಪು, ಜು 11: ಕಾಪು ಮೂಳೂರು ಹಳ್ಳಿ ಮನೆ ಹೋಟೇಲು ಎದುರು ರಾಷ್ಟ್ರೀಯ ಹೆದ್ದಾರಿ 66ರ ಮಧ್ಯದಲ್ಲಿ ಭೂ ಕುಸಿತ ಉಂಟಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಸಂಜೆ ಸುಮಾರು 5 ಗಂಟೆಯ ವೇಳೆಗೆ ಮಂಗಳೂರಿನಿಂದ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂ ಕುಸಿತ ಉಂಟಾಗಿದೆ. ಆನಂತರ ಕೆಲವೊಂದು ಬೈಕ್ ಸವಾರರು ಈ ಹೊಂಡಕ್ಕೆ ಬಿದ್ದ ಪರಿಣಾಮ ಸ್ಥಳೀಯರು ಆಗಮಿಸಿ ಪರಿಶೀಲಿಸಿದಾಗ, ಭೂ ಕುಸಿತ ಉಂಟಾಗಿದ್ದು ಕಂಡು ಬಂದಿದೆ.
ಹೆದ್ದಾರಿ ನಿರ್ಮಾಣಕ್ಕೂ ಮುಂಚಿತವಾಗಿ ಹಳೆ ಹೆದ್ದಾರಿಯು ಅಗಲ ಕಿರಿದಾಗಿದ್ದು, ಈ ಜಾಗದಲ್ಲಿ ಪೂವಲೆ ಪೂಜಾರ್ತಿಯವರಿಗೆ ಸೇರಿದ ಬಾವಿಯೊಂದು ಇತ್ತು. ಹೆದ್ದಾರಿ ಅಗಲೀಕರಣದ ಸಂದರ್ಭ ಅದನ್ನು ಮುಚ್ಚಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಪು ಪೋಲೀಸರು ಸ್ಥಳಕ್ಕೆ ಆಗಮಿಸಿ ಕುಸಿತಗೊಂಡ ಪ್ರದೇಶದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಇನ್ನು ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪನಿ ಅಧಿಕಾರಿ ಕೃಷ್ಣ ಮೂರ್ತಿ ಮಾಧ್ಯಮದವರೊಂದಿಗೆ ಮಾತನಾಡಿ, ಕುಸಿತಗೊಂಡ ಜಾಗಕ್ಕೆ ಈಗ ಜಲ್ಲಿ ಹಾಕಿ ಮುಚ್ಚುತ್ತೇವೆ. ನಮ್ಮ ಮೇಲಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಕಾಂಕ್ರೀಟ್ ಹಾಕಿ ಸರಿ ಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.