ಮಂಗಳೂರು, ಫೆ.06 (DaijiworldNews/PY): ಕದ್ರಿ ಉದ್ಯಾನವನದ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸುವಂತೆ ದ.ಕ ಜಿಲ್ಲಾ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಅವರು ತೋಟಗಾರಿಕೆ ಇಲಾಖೆ, ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಫೆಬ್ರವರಿ 5 ಶುಕ್ರವಾರ ಉದ್ಯಾನವನದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಗಂಗನಪಳ್ಳದಲ್ಲಿ ಸುಮಾರು 30 ಲಕ್ಷ ಲೀಟರ್ ನೀರನ್ನು ಸಂಗ್ರಹಿಸಬಹುದಾಗಿದೆ. ಅದನ್ನು ಸ್ವಚ್ಛಗೊಳಿಸಿ ಬಳಿಕ ಪ್ಲಾಸ್ಟಿಕ್ ಅಳವಡಿಸಿ ನೀರು ಸಂಗ್ರಹಿಸಿ ಗಿಡಗಳಿಗೆ ಆ ನೀರನ್ನು ಬಳಕೆ ಮಾಡಬಹುದು. ಪ್ರಸ್ತುತ ಬಳಸಿದ ನೀರು ಶುದ್ಧವಾಗಿ ಪಾರ್ಕ್ಗೆ ಸರಬರಾಜು ಮಾಡಲಾಗುತ್ತಿದೆ. ಸಂಗ್ರಹಿಸಡಲು ವ್ಯವಸ್ಥೆಯಾಗಲಿದೆ" ಎಂದಿದ್ದಾರೆ.
ಉದ್ಯಾನವನದೊಳಗಿನ ಕಾರಂಜಿ ಒಂದು ದಶಕದಿಂದಲೂ ಕಾರ್ಯನಿರ್ವಹಿಸುತ್ತಿಲ್ಲ. ಕಾರಂಜಿಯನ್ನು ಸರಿಪಡಿಸಿ ಅದನ್ನು ಆಕರ್ಷಣೀಯಗೊಳಿಸಲು ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದರು. ಮುಡಾ ಪಾರ್ಕ್ ಸೆಸ್ ಸಂಗ್ರಹಿಸುತ್ತಿದ್ದು, ಆ ಮೊತ್ತವನ್ನು ಉದ್ಯಾನವನದ ಅಭಿವೃದ್ದಿಗೆ ಬಳಸುವಂತೆ ಸೂಚಿಸಿದರು.
ಲೇಸರ್ ಶೋ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಟೆಂಡರ್ ಮೂಲಕ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸ್ಕೇಟಿಂಗ್ ಮೈದಾನ ಅಭಿವೃದ್ದಿಪಡಿಸುವ ಯೋಜನೆಯನ್ನು ರೂಪಿಸುವಂತೆ ಸೂಚಿಸಿದರು.
"ಉದ್ಯಾನವನದಲ್ಲಿ ಹೆಚ್ಚು ವಿದ್ಯುತ್ ಬಳಕೆಯ ಅವಶ್ಯಕತೆ ಇಲ್ಲ. ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ಪುಟಾಣಿ ರೈಲು ಓಡಾಡುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಎರಡು ಇಲಾಖೆಗಳು ಹಂಚಿಕೊಳ್ಳುವ ಬದಲಾಗಿ ಒಂದೇ ಇಲಾಖೆಗೆ ವಹಿಸಿಕೊಡುವುದು ಉತ್ತಮ" ಎಂದು ಹೇಳಿದ್ದಾರೆ.
"ಇಲ್ಲಿನ ಜಿಂಕೆ ಪಾರ್ಕ್ನಲ್ಲಿ ಯಾವುದೇ ಜಿಂಕೆಗಳಿಲ್ಲ. ಹಾಗಾಗಿ ನಾಲ್ಕು ಜಿಂಕೆಗಳನ್ನು ಇಲ್ಲಿಡಲು ವ್ಯವಸ್ಥೆ ಮಾಡಬೇಕು. ಇಲ್ಲಿನ ಎರಡೂ ಪಾರ್ಕ್ಗಳು ಕೂಡಾ ಜೋಡಣೆಯಾದರೆ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ" ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಹೇಳಿದ್ದಾರೆ.
ಉದ್ಯಾನವನದೊಳಗೆ ಜಿಮ್ ಸಲಕರಣೆಗಳ ನಿರ್ವಹಣೆಯಾಗುತ್ತಿಲ್ಲ. ಅದನ್ನು ಯಾವುದಾದರೂ ಸಿಎಸ್ಆರ್ ಫಂಡ್ ಉಪಯೋಗಿಸಿ ಸರಿಪಡಿಸಲು ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.
"ಉದ್ಯಾನವನದಲ್ಲಿ ರೈತರು ಬೆಳೆದ ಹಣ್ಣುಗಳು ಹಾಗೂ ತರಕಾರಿಗಳನ್ನು ಮಾರಾಟ ಮಾಡಲು ತಿಂಗಳಿಗೊಮ್ಮೆ ಉದ್ಯಾನವನದಲ್ಲಿ ಸಂತೆ ಆಯೋಜಿಸಬಹುದು. ಇದರಿಂದ ಬರುವ ಆದಾಯವನ್ನು ಉದ್ಯಾನವನದ ನಿರ್ವಹಣೆಗೆ ಬಳಸಬಹುದು. ಇಲಾಖೆ ಅನುದಾನದಿಂದ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್. ನಾಯ್ಕ, ಹಿರಿಯ ಸಹಾಯಕ ನಿರ್ದೇಶಕಿ ಜಾನಕಿ, ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.