ಉಡುಪಿ, ಫೆ.06 (DaijiworldNews/PY): "ನಾವೆಲ್ಲರೂ ರೈತ ಮಕ್ಕಳೇ. ರೈತ ಮತ್ತು ಸೈನಿಕ ಈ ದೇಶದ ಬೆನ್ನೆಲುಬು. ಅವರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನೈತಿಕ ಬೆಂಬಲ ನೀಡುತ್ತೇವೆ" ಎಂದು ಕರವೇ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದರು.


ಉಡುಪಿಯಲ್ಲಿ ಮಾತನಾಡಿದ ಅವರು, "ಉನ್ನತ ಸ್ಥಾನದಲ್ಲಿರುವ ಮಹಾರಾಷ್ಟ ಮುಖ್ಯಮಂತ್ರಿ ದೇಶದ್ರೋಹದ ಕೆಲಸ ಮಾಡುತ್ತಾ ಇದ್ದಾರೆ. ತಕ್ಷಣ ಕಾಂಗ್ರೆಸ್ ಅವರಿಗೆ ಕೊಟ್ಟ ಬೆಂಬಲವನ್ನು ವಾಪಾಸು ಪಡೆಯಬೇಕು. ಅವರಿಗೆ ಈ ಭೂಮಿಯ ಒಂದು ಹಿಡಿ ಮಣ್ಣು ಕೂಡ ಕಿತ್ತುಕೊಳ್ಳಲು ಆಗಲ್ಲ. ಮುಂದೆ ಉದ್ದವ್ ಠಾಕ್ರೆಗೆ ತಕ್ಕ ಉತ್ತರ ಕೊಡುತ್ತೇವೆ. ಕನ್ನಡ ಹೋರಾಟಗಾರರ ಬಾವುಟಗಳನ್ನು ಇಡಲು ಹೋದರೆ ಅವರ ಮೊಕದ್ದಮೆ ಹಾಕುತ್ತಿದ್ದಾರೆ. ಅದೇ ಶಿವಸೇನೆಯವರು ಗಡಿ ಒಳಗೆ ಬಂದು ಕನ್ನಡದ ಬಾವುಟ ಕಿತ್ತು ಹಾಕುತ್ತಾ, ಕನ್ನಡಿಗರ ವಿರುದ್ಧ ಅದೇನೇ ಮಾಡಿದರು ಸರಕಾರದ ಶವಯಾತ್ರೆ ಮಾಡುತ್ತೇವೆ. ಕರ್ನಾಟಕ ಸರಕಾರ ಅವರನ್ನ ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುತ್ತಿದೆ. ಇಂಥ ಕಿಡಿಗೇಡಿ ಗುಂಡಾಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.
"ಜಗದೀಶ್ ಅವರ ಕಾಲದಲ್ಲಿ ಸೊಲ್ಲಾಪುರ, ಅಕ್ಕಲ ಕೋಟೆ , ಜತ್ತದ ಕನ್ನಡಿಗರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ತದ ನಂತರದ ನಾಯಕರು ಇದರ ಬಗ್ಗೆ ಏನು ಕೆಲಸ ಮಾಡೇ ಇಲ್ಲ. ಇದೆ ಮುಂದುವರಿದರೆ ಸೊಲ್ಲಾಪುರ, ಅಕ್ಕಲ ಕೋಟೆ, ಜತ್ತ ಚಲೋ ಕಾರ್ಯಕ್ರಮವನ್ನು ವೇದಿಕೆ ವತಿಯಿಂದ ಹಾಕುತ್ತೇವೆ. ತಕ್ಕ ಉತ್ತರ ಕೊಡ್ತೇವೆ" ಎಂದರು.
"ಕರ್ನಾಟಕದ ಒಂದು ಹಿಡಿ ಮಣ್ಣನ್ನು ಮುಟ್ಟಕ್ಕಾಗಲ್ಲ. ಹಿಂದೆ ಇದೇ ರೀತಿಯಾಗಿದ್ದಾಗ ಮುಖಕ್ಕೆ ಮಸಿ ಬಳಿ ಮುಖಾಂತರ ಅನೇಕ ಬಾರಿ, ಲಾಠಿ ಏಟು ಜೈಲನ್ನು ನೋಡಿದ್ದೇವೆ. ಮುಂದೆ ಈ ಥರ ಹೇಡಿ ಕೆಲಸ ಮಾಡಿದರೆ ಉದ್ದವ್ ಠಾಕ್ರೆಗೆ ತಕ್ಕ ಉತ್ತರ ಕೊಡುತ್ತೇವೆ. ಮುಂದೆ ಅವರ ವಿರೋಧ ಮಹಾರಾಷ್ಟ್ರ ಚಲೋ ಎನ್ನುವ ಕಾರ್ಯಕ್ರಮ ಮಾಡುತ್ತೇವೆ" ಎಂದರು.