ಮಂಗಳೂರು, ಫೆ.06 (DaijiworldNews/HR): "ತುಳುವಾಡ ವೀರಪುರಷರಾದ ಕೋಟಿ-ಚೆನ್ನಯ್ಯ, ಬಿಲ್ಲವ ಸಮುದಾಯ ಮತ್ತು ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ವಾರದೊಳಗೆ ಕ್ಷಮೆಯಾಚಿಸಬೇಕು" ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.


ಈ ಕುರಿತು ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, "ಜಗದೀಶ್ ಅವರು ಕಾಂಗ್ರೆಸ್ನಲ್ಲಿದ್ದಾಗ ಪೂಜಾರಿಯ ಕಾಲಿಗೆ ಬಿದ್ದಿರುವುದನ್ನು ನಾನು ಕಂಡಿದ್ದೇನೆ. ಈಗ ಪೂಜಾರಿಯ ಕಾಲು ಹಿಡಿಯಬೇಕಾ ಎಂದು ಕೇಳಿರುವುದೇ ವಿಪರ್ಯಾಸ. ಅಧಿಕಾರಿಯವರ ಇಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ. ಗೌರವಾನ್ವಿತ ಸ್ಥಾನದಲ್ಲಿರುವುದರಿಂದ ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಶಾಸಕರು, ಸಂಸದರು ಸೇರಿದಂತೆ ಬಿಜೆಪಿ ಮುಖಂಡರು ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಅಧಿಕಾರಿಯ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು. ಬಿಲ್ಲವ ಸಮುದಾಯವು ಮತಗಳಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಈ ನಾಯಕರು ನಿಲುವು ತೆಗೆದುಕೊಳ್ಳುತ್ತಾರೆಯೇ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಬೇಕು”ಎಂದರು.
ಇನ್ನು ಜಗದೀಶ್ ಅಧಿಕಾರಿ ವರು ಏಳು ದಿನಗಳಲ್ಲಿ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, "ಕೋಟಿ-ಚೆನ್ನಯ್ಯ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಂದು, ಹಲವಾರು ಬಿಲ್ಲವ ಯುವಕರು ಜೈಲಿನಲ್ಲಿದ್ದಾರೆ ಏಕೆಂದರೆ ಅವರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿತ್ತು" ಎಂದರು.
ಕಾರ್ಪೋರೇಟರ್ ಪ್ರವೀಣ್ಚಂದ್ರ ಆಳ್ವ, ಅನಿಲ್ ಕುಮಾರ್, ಶೋಭಾ ಕೇಶವ್, ರಾಕೇಶ್ ದೇವಾಡಿಗ, ಪುರುಷೋತ್ತಮ ಚಿತ್ರಾಪುರ ಉಪಸ್ಥಿತರಿದ್ದರು.