ಉಡುಪಿ, ಫೆ.06 (DaijiworldNews/HR): "ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ವಿದ್ಯಾರ್ಹತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಇಚ್ಚಿಸುವವರನ್ನು, ಹೊರಗುತ್ತಿಗೆ ಮೂಲಕ ನೇಮಕ ಮಾಡುವ ಸಂದರ್ಭಗಳಲ್ಲಿ ಅವಕಾಶ ನೀಡಬೇಕು" ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.



ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುರ್ನವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ, ದಮನಿತ ಮಹಿಳೆಯರ ಸಲಹಾ ಸಮಿತಿ ಹಾಗೂ ತರಬೇತಿ ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಲಿಂಗತ್ವ ಅಲ್ಪ ಸಂಖ್ಯಾತರ ವಿದ್ಯಾರ್ಹತೆಗೆ ಅನುಗುಣವಾಗಿ, ಜಿಲ್ಲೆಯ ವಿವಿಧ ಕಚೇರಿಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳನ್ನು ಪಡೆಯುವ ಸಂದರ್ಭದಲ್ಲಿ ಅವರಿಗೆ ವಿಶೇಷ ಆದ್ಯತೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಅವರ ವಿದ್ಯಾರ್ಹತೆಯ ಕುರಿತ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುವಂತೆ ಹಾಗೂ ಸ್ವ-ಉದ್ಯೋಗ ಮಾಡಲು ಇಚ್ಛಿಸಿ, ಇದಕ್ಕಾಗಿ ತರಬೇತಿಯ ಅವಶ್ಯಕತೆಯ ಇರುವವವರಿಗೆ ಅಗತ್ಯ ತರಬೇತಿ ಪಡೆಯಲು ವ್ಯವಸ್ಥೆ ಮಾಡುಬೇಕು" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
"ನಿವೇಶನದ ಅಗತ್ಯ ಇರುವ ಲಿಂಗತ್ವ ಅಲ್ಪ ಸಂಖ್ಯಾತರು ತಾವು ವಾಸಿಸುವ ಗ್ರಾಮ ಆಥವಾ ನಗರಪ್ರದೇಶದಲ್ಲಿ ಸಂಬಂಧಪಟ್ಟ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ನಿವೇಶನ ಹಂಚಿಕೆ ಸಮಯದಲ್ಲಿ ವಿಶೇಷ ವರ್ಗದ ಅಡಿಯಲ್ಲಿ ಮೀಸಲಿಡುವ ನಿವೇಶನಗಳನ್ನು ಅರ್ಹ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಮಂಜೂರು ಮಾಡುಬೇಕು" ಎಂದು ಹೇಳಿದರು.
"ಲಿಂಗತ್ವ ಅಲ್ಪ ಸಂಖ್ಯಾತರು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಬೆರೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು, ಸರ್ಕಾರದ ವಿವಿಧ ಯೋಜನೆಯ ಪ್ರಯೋಜನವನ್ನು ದೊರಕಿಸಲು ಜಿಲ್ಲಾಡಳಿತ ಬದ್ದವಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ತಮ್ಮಲ್ಲಿಯೇ ಭಿನ್ನಾಭಿಪ್ರಾಯಗಳನ್ನು ಹೊಂದಿರದೇ, ಎಲ್ಲರೂ ಒಗಟ್ಟಿನಿಂದ ತಮ್ಮ ಸಮುದಾಯದ ಅಭಿವೃದ್ಧಿಗೆ ಕೆಲಸ ನಿರ್ವಹಿಸಬೇಕು" ಎಂದು ಡಿಸಿ ಜಿ.ಜಗದೀಶ್ ಹೇಳಿದರು.
ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆಯಡಿ ನಿಗಧಿತ ಗುರಿಯನ್ವಯ 7 ಮಂದಿಗೆ ಸೌಲಭ್ಯ ಮಂಜೂರು ಮಾಡಿದ ಜಿಲ್ಲಾಧಿಕಾರಿಗಳು, ಹೆಚ್ವುವರಿಯಾಗಿ ಸಲ್ಲಿಕೆಯಾಗಿದ್ದ 4 ಅರ್ಜಿದಾರರಿಗೂ ಸಹ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಪತ್ರ ಬರೆಯುಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಿಹೆಚ್ಓ ಡಾ.ಸುದೀರ್ ಚಂದ್ರ ಸೂಡಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.