ಉಡುಪಿ, ಫೆ.06 (DaijiworldNews/HR): "ಜಿಲ್ಲೆಯಲ್ಲಿ ಇತ್ತೀಚೆಗೆ ಬಾಲ್ಯ ವಿವಾಹ ನಡೆಸಲು ಯತ್ನಿಸಿದವರು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಬೇಕು" ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಕುಂದಾಪುರದ ತ್ರಾಸಿಯಲ್ಲಿ ಅಪ್ರಾಪ್ತ ಬಾಲಕಿಗೆ ದೇವಸ್ಥಾನದಲ್ಲಿ ವಿವಾಹ ಮಾಡುತ್ತಿರುವ ಕುರಿತಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮದುವೆಯನ್ನು ನಿಲ್ಲಿಸಿ, ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಆದರೆ ಆ ವಿವಾಹ ಸಂದರ್ಭದಲ್ಲಿ ಹಾಜರಿದ್ದವರು ಹಾಗೂ ಸಹಕರಿಸದವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿಗಳು, ಈ ರೀತಿಯ ಕ್ರಮಗಳಿಂದ ಬಾಲ್ಯ ವಿವಾಹ ಮಾಡುವವರಿಗೆ ಕಾನೂನು ಉಲ್ಲಂಘನೆಯ ಪರಿಣಾಮ ತಿಳಿಯವುದಿಲ್ಲ. ಆದ್ದರಿಂದ ಅಂದು ವಿವಾಹದಲ್ಲಿ ಭಾಗವಹಿಸಿದ್ದವರು ಮತ್ತು ಸಹಕರಿಸಿದವರ ವಿರುದ್ದ ಪ್ರಕರಣ ದಾಖಲಿಸಬೇಕು" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
"ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತಂತೆ ಜಿಲ್ಲೆಯ ಎಲ್ಲಾ ಕಲ್ಯಾಣ ಮಂಟಪ ಮಾಲೀಕರು, ದೇವಾಲಯಗಳ ಅರ್ಚಕರು, ಕ್ಯಾಟರ್ಸ್ಗಳಿಗೆ ಅರಿವು ಮೂಡಿಸುವ ಕಾರ್ಯಾಗಾರ ಏರ್ಪಡಿಸಿ, ವಲಸೆ ಕಾರ್ಮಿಕರಲ್ಲಿ ಬಾಲ್ಯ ವಿವಾಹಗಳು ಕಂಡು ಬರಲಿದ್ದು ಅಂತಹ ಪ್ರದೇಶಗಳ ಮೇಲೆ ನಿಗಾ ಇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅಧಿಕಾರಿಗಳಿಗೆ ಹಾಗೂ 8, 9, 10 ನೇ ತರಗತಿಯ ವಿದ್ಯಾರ್ಥಿನಿಯರು 7 ದಿನಗಳಿಗಿಂತ ಹೆಚ್ಚು ಗೈರು ಹಾಜರಾದರೆ ಈ ಬಗ್ಗೆ ಪೋಷಕರನ್ನು ಸಂಪರ್ಕಿಸಿ ವಿವರ ಪಡೆಯಬೇಕು" ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.
ಇನ್ನು "ಜಿಲ್ಲೆಯ ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗುವ ದೂರುಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸಿ, ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾದ ದೂರುಗಳ ಕುರಿತು ಕಾಲ ಮಿತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯುವ ಕುರಿತಂತೆ ಸಂಬಂಧಪಟ್ಟ ಕಚೇರಿಯಲ್ಲಿ ಸಮಿತಿ ರಚಿಸಿರುವ ಕುರಿತಂತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಕಚೇರಿಗಳಲ್ಲಿ ಇದುವರೆಗೆ ಸಮಿತಿ ರಚಿಸದ ಇಲಾಖೆಗಳಿಗೆ ನೊಟೀಸ್ ನೀಡಿ, ಖಾಸಗಿ ಸಂಸ್ಥೆಗಳಲ್ಲೂ ಸಹ ಕಡ್ಡಾಯವಾಗಿ ಸಮಿತಿ ರಚಿಸಿರುವ ಕುರಿತು ಪರಿಶೀಲಿಸಬೇಕು" ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ ಕಾಲೇಜುಗಳು ಆರಂಭಗೊಂಡಿದ್ದು, ಮಾದಕ ವಸ್ತುಗಳ ಸರಬರಾಜು ಮತ್ತು ಸೇವನೆ ನಡೆಯುವ ಕುರಿತಂತೆ ಪೊಲೀಸ್ ಇಲಾಖೆ ವತಿಯಿಂದ ಪರಿಶೀಲನೆ ನಡೆಯಬೇಕು. ನಶಾ ಮುಕ್ತ ಕಾರ್ಯಕ್ರಮ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಡಿಸಿ ತಿಳಿಸಿದರು.
ಸಾಂತ್ವನ ಯೋಜನೆಯಡಿ ಉಡುಪಿಯಲ್ಲಿ ಅಕ್ಟೋಬರ್ 2020 ರಿಂದ ಜನವರಿ 2021 ರ ವರೆಗೆ 24 ಪ್ರಕರಣ, ಕುಂದಾಪುರದಲ್ಲಿ 22 ಹಾಗೂ ಕಾರ್ಕಳದಲ್ಲಿ 32 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹಲವು ಪ್ರಕರಣಗಳು ಇತ್ಯರ್ಥವಾಗಿದ್ದು, ಕೆಲವು ಸಾಂತ್ವನ ಕೇಂದ್ರದಲ್ಲಿ ಮತ್ತು ನ್ಯಾಯಾಲಯದಲ್ಲಿ ಬಾಕಿ ಇವೆ. ಏಪ್ರಿಲ್ 2020 ರಿಂದ ಡಿಸೆಂಬರ್ ವರೆಗೆ ಫೋಕ್ಸೋ ಅಡಿಯಲ್ಲಿ 29 ಪ್ರಕರಣ ದಾಖಲಾಗಿವೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 14 ಪ್ರಕರಣಗಳು ದಾಖಲಾಗಿದ್ದು, 9 ಇತ್ಯರ್ಥಗೊಂಡಿದ್ದು 5 ಬಾಕಿ ಇವೆ. ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ 70 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್, ಸಿಇಓ ಡಾ. ನವೀನ್ ಭಟ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.