ಕಾಸರಗೋಡು, ಫೆ.07 (DaijiworldNews/MB) : ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಸಿಪಿಎಂ ಉದುಮ ವಲಯ ಕಚೇರಿಗೆ ತಲುಪಿ ತಪಾಸಣೆ ನಡೆಸಿದೆ ನಡೆಸಿದೆ.

ಪ್ರಕರಣದ 14 ಆರೋಪಿ ಎಂದು ಗುರುತಿಸಲಾದ ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ನಿಂದಲೂ ಮಾಹಿತಿ ಕಲೆ ಹಾಕಿದೆ.
ಕೃತ್ಯ ನಡೆಸಿದ ಬಳಿಕ ಆರೋಪಿಗಳು ಸಿಪಿಎಂ ಉದುಮ ಕಚೇರಿಗೆ ಬಂದು ತಂಗಿದ್ದರು ಎನ್ನಲಾಗಿದೆ. ಬಳಿಕ ಆರೋಪಿಗಳು ಕೃತ್ಯದ ಸಂದರ್ಭದಲ್ಲಿ ಧರಿಸಿದ್ದ ವಸ್ತ್ರಗಳನ್ನು ಉರಿಸಿದ ಸ್ಥಳಕ್ಕೂ ತಲುಪಿ ತಪಾಸಣೆ ನಡೆಸಿದೆ. ಕೃತ್ಯದ ಬಳಿಕ ವಾಹನ ತೊರೆದು ಹೋದ ಸ್ಥಳಕ್ಕೂ ಭೇಟಿ ನೀಡಿದೆ. ಶರತ್ ಲಾಲ್ರ ತಾಯಿ ಲತಾ ಮತ್ತು ಕೃಪೇಶ್ರವರ ತಂದೆ ಕೃಷ್ಣನ್ ರಿಂದಲೂ ಮಾಹಿತಿ ಕಲೆ ಹಾಕಿದೆ. ಸಿಬಿಐ ಡಿವೈಎಸ್ಪಿ ಅನಂತಕೃಷ್ಣ ನೇತೃತ್ವದ ತಂಡವೂ ತನಿಖೆ ಆರಂಭಿಸಿದೆ.
2019 ರ ಫೆಬ್ರವರಿ 17 ರಂದು ರಾತ್ರಿ ಪೆರಿಯ ಕಲ್ಯೊಟ್ನಲ್ಲಿ ಕೊಲೆ ನಡೆದಿತ್ತು. ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಾಗ ತಂಡವು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಕೃತ್ಯ ನಡೆಸಿದ ಬಳಿಕ ನಾಲ್ವರು ಆರೋಪಿಗಳು ಸಿಪಿಎಂ ಕಚೇರಿಯಲ್ಲಿ ಹಾಗೂ ಉಳಿದವರು ವೆಳ್ಳತ್ತೋಳಿ ಎಂಬಲ್ಲಿನ ಮನೆಯೊಂದರಲ್ಲಿ ತಂಗಿದ್ದರು ಎಂದು ಈ ಹಿಂದೆ ತನಿಖೆ ನಡೆಸಿದ ಕ್ರೈಂ ಬ್ರಾಂಚ್ ವರದಿಯಲ್ಲಿ ಉಲ್ಲೇಖಿಸಿತ್ತು.
ಸಿಬಿಐ ತನಿಖೆಗೆ ಹೈಕೋರ್ಟ್ ಈ ಹಿಂದೆಯೇ ಆದೇಶ ನೀಡಿತ್ತು. ಆದರೆ ಕೇರಳ ಸರಕಾರ ಮೇಲ್ಮನವಿ ಸಲ್ಲಿಸಿದ್ದರಿಂದ ವಿಳಂಬಗೊಂಡಿತ್ತು. ಕೊನೆಗೆ ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಕೇರಳ ಸರಕಾರದ ಮೇಲ್ಮನವಿಯನ್ನು ತಿರಸ್ಕರಿದ್ದರಿಂದ ಸಿಬಿಐ ತನಿಖೆ ಚುರುಕುಗೊಳಿಸಿದೆ. ಪ್ರಕರಣದಲ್ಲಿ ಸಿಪಿಎಂ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಪೀತಾಂಬರನ್ ಪ್ರಥಮ ಆರೋಪಿಯಾಗಿದ್ದು, ಒಟ್ಟು 14 ಮಂದಿ ಆರೋಪಿಗಳಿದ್ದಾರೆ.