ಮಂಗಳೂರು, ಫೆ.07 (DaijiworldNews/MB) : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅರ್ಧಕ್ಕಿಂತ ಅಧಿಕ ಮೀನುಗಾರಿಕೆ ಚಟುವಟಿಕೆಗಳು ಹಠಾತ್ತನೆ ಕೊನೆಗೊಂಡಿವೆ. ಸಾಮಾನ್ಯವಾಗಿ, ದೋಣಿಗಳು ಜೂನ್ ನಂತರ ಬಂದರಿನಲ್ಲಿ ಮೀನುಗಾರಿಕೆ ಆರಂಭಿಸುತ್ತದೆ. ಆದರೆ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಸಾವಿರಾರು ದೋಣಿಗಳನ್ನು ಮಂಗಳೂರು ಬಂದರು ಮತ್ತು ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಹಡಗುಗಳು ಲಂಗರು ಹಾಕಿದೆ.

ಮೀನು ಕ್ಷಾಮ, ಕಳೆದ ನಾಲ್ಕು ತಿಂಗಳಿನಿಂದ ಮೀನುಗಾರರಿಗೆ ತಲುಪದ ಡೀಸೆಲ್ ತೆರಿಗೆ ರಿಯಾಯಿತಿ, ಏರುತ್ತಿರುವ ಡೀಸೆಲ್ ಬೆಲೆ, ಕಾರ್ಮಿಕರ ವೇತನ, ಬಲೆಗಳು, ಹಗ್ಗಗಳು, ಕಬ್ಬಿಣದ ವಸ್ತುಗಳು, ಐಸ್ ಮತ್ತು ಇತರ ನಿರ್ವಹಣಾ ವೆಚ್ಚಗಳ ಹೆಚ್ಚಳ ಮೀನುಗಾರಿಕೆ ಚಟುವಟಿಕೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಪ್ರಮುಖ ಕಾರಣಗಳಾಗಿವೆ.
ಕೊರೊನಾ ಕಾರಣದಿಂದಾಗಿ ಈಗಾಗಲೇ ಮೀನುಗಾರರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಈ ಕಾರಣದಿಂದಾಗಿ ಈ ವರ್ಷ ಅವರು ಮೀನುಗಾರಿಕೆಯತ್ತ ಹೆಚ್ಚು ಗಮನ ಹರಿಸಿದ್ದರು. ಆದರೆ ಮೀನು ಕ್ಷಾಮ ಮತ್ತು ಇತರ ಸಮಸ್ಯೆಗಳು ಅವರ ಜೀವನವನ್ನು ಶೋಚನೀಯವಾಗಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30,000 ವೃತ್ತಿಪರ ಮೀನುಗಾರರು ಇದ್ದಾರೆ. ಎರಡು ಜಿಲ್ಲೆಗಳು ಒಟ್ಟಾಗಿ 4,800 ಕ್ಕೂ ಹೆಚ್ಚು ದೋಣಿಗಳನ್ನು ಹೊಂದಿವೆ. ಆದರೆ ನಿರ್ವಹಣಾ ವೆಚ್ಚದ ಹೆಚ್ಚಳದಿಂದಾಗಿ, ಸಾವಿರಾರು ದೋಣಿಗಳು ಈಗ ಲಂಗಾರು ಹಾಕಿದೆ.
''ಮೀನುಗಾರರು ಪ್ರತಿ ತಿಂಗಳು ಸರಾಸರಿ ಮೂರು ಬಾರಿ ಮೀನುಗಾರಿಕೆ ನಡೆಸಿದರೆ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ಹಿಡಿಯಲು ಸಾಧ್ಯವಾಗುತ್ತದೆ. ಆದರೆ ಅದಕ್ಕೆ ಆಗುವ ಖರ್ಚನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಡೀಸೆಲ್ ಸಬ್ಸಿಡಿ ವಿತರಿಸದಿರುವುದು ಮತ್ತು ಸೀಮೆಎಣ್ಣೆಯ ಕೊರತೆ ಅವರ ಸಮಸ್ಯೆಗಳಿಗೆ ಕಾರಣವಾಗಿದೆ. ಡಿಸೇಲ್ ಬೆಲೆಯೂ ಏರಿಕೆಯಾಗಿವೆ. ಆದರೆ ನಿರ್ದಿಷ್ಟ ರೀತಿಯ ಮೀನುಗಳಿಗೆ ಬೇಡಿಕೆ ಕಡಿಮೆಯಾಗಿದೆ ಮತ್ತು ರಫ್ತಿಗೆ ತೊಂದರೆಯಾಗಿದೆ. ಹೆಚ್ಚಿನ ಸಂಖ್ಯೆಯ ದೋಣಿಗಳು ಮೀನುಗಾರಿಕೆ ನಡೆಸುವುದು, ಕೈಗಾರಿಕಾ ತ್ಯಾಜ್ಯಗಳು ಸಮುದ್ರಕ್ಕೆ ಬಿಡುವುದು, ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ಮೀನುಗಾರಿಕೆಗೆ ತೊಂದರೆ ಉಂಟು ಮಾಡಿದ ಅಂಶಗಳಾಗಿದೆ. ಮೀನುಗಾರರು ತಪ್ಪಿ ಕೇರಳ ಅಥವಾ ಗೋವಾ ಮಿತಿಗಳನ್ನು ದಾಟಿದರೆ ಮೀನುಗಾರರಿಗೆ ಅವರು ಹಿಡಿದ ಮೀನುಗಳ ಪ್ರಮಾಣಕ್ಕಿಂತ ಐದು ಪಟ್ಟು ದಂಡ ವಿಧಿಸಲಾಗುತ್ತದೆ. ಆದರೆ ಇತರ ರಾಜ್ಯಗಳ ಮೀನುಗಾರರು ಕರ್ನಾಟಕದಲ್ಲಿ ಮುಕ್ತವಾಗಿ ಮೀನು ಹಿಡಿಯುತ್ತಿದ್ದಾರೆ. ಈ ವಿಷಯದಲ್ಲಿ ಸರ್ಕಾರಕ್ಕೆ ಮಾಡಿದ ಮನವಿಯು ಯಾವುದೇ ಪ್ರಯೋಜನವಾಗಿಲ್ಲ. ಡಿಸೇಲ್ ಸಬ್ಸಿಡಿ ಬಗ್ಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ'' ಎಂದು ಹೇಳುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ.