ಮೂಡುಬಿದಿರೆ, ಫೆ.07 (DaijiworldNews/MB) : "ನಾನು ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ. ನನ್ನ ತಪ್ಪಿಗೆ ಕ್ಷಮೆಯಿದೆ ಎಂದು ನಾನು ಭಾವಿಸುತ್ತೇನೆ" ಎಂದು ಬಿಜೆಪಿ ನಾಯಕ ಕೆ.ಪಿ.ಜಗದೀಶ್ ಅಧಿಕಾರಿ ಅವರು ತುಳುನಾಡಿನ ಪೂಜ್ಯ ದೈವ ಕೋಟಿ-ಚೆನ್ನಯ್ಯ ಮತ್ತು ಮಾಜಿ ಕೇಂದ್ರ ಸಚಿವರು, ಹಿರಿಯ ರಾಜಕಾರಣಿ ಬಿ ಜನಾರ್ಧನ ಪೂಜಾರಿ ಅವರ ಬಗ್ಗೆ ತಾವು ನೀಡಿದ ಹೇಳಿಕೆಗೆ ಕ್ಷಮೆಯಾಚಿಸಿದರು.

ಕೋಟಿ-ಚೆನ್ನಯ್ಯ ಮತ್ತು ಪೂಜಾರಿ ಕುರಿತು ಅಧಿಕಾರಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆಯೇ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.
ಈ ಬಗ್ಗೆ ಫೆಬ್ರವರಿ 7 ರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧಿಕಾರಿ, "ಜನಾರ್ಧನ ಪೂಜಾರಿ ನನ್ನ ರಾಜಕೀಯ ಗುರು. ಬಿಲ್ಲವ ಸಮುದಾಯ ನನ್ನ ಹೃದಯ. ನಾನು ಯೋಚಿಸದೆ ತಪ್ಪಾಗಿ ಹೇಳಿದ್ದೇನೆ. ನಾನು ಸಹ ದೈವದ ಕಟ್ಟಾ ಭಕ್ತ. ನಾನು ಪಂಚಶಕ್ತಿಯ ಜೊತೆಗೆ ಕೋಟಿ-ಚೆನ್ನಯ್ಯವನ್ನೂ ಆರಾಧಿಸುತ್ತೇನೆ. ಜಿಲ್ಲೆಯ ಗರಡಿಗಳಲ್ಲಿ ನನ್ನ ಕುಟುಂಬದ ಹಿರಿಯರ ಗರಡಿ ಕೂಡ ಇದೆ'' ಎಂದು ಹೇಳಿದರು.
"ನಾನು ಅವಳಿ ಯೋಧರ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆಯನ್ನು ಅರ್ಪಿಸುತ್ತೇನೆ. ನಾನು ಮಾಡಿದ ತಪ್ಪಿಗೆ ನಾನು ದೈವಗಳಿಗೆ ಪ್ರಾರ್ಥನೆ ಮತ್ತು ಸಂಕ್ರಮಣ ಪರ್ವವನ್ನು ಅರ್ಪಿಸುತ್ತೇನೆ. ಈ ವಿಷಯವನ್ನು ಇಲ್ಲೇ ಮುಕ್ತಾಯಗೊಳಿಸಬೇಕು ಎಂದು ಹೇಳಿದರು.
"ನಾನು ಪೂಜಾರಿಯವರ ಮನೆಗೆ ಭೇಟಿ ನೀಡಿದ್ದೇನೆ ಮತ್ತು ಅವನ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದೇನೆ. ಅವರು ಈ ರಾಷ್ಟ್ರದ ಶಕ್ತಿ. ಅವರ ಕೂದಳೆಲೆಗೂ ನಾನು ಸಮನಲ್ಲ. ಒಂದು ವೇಳೆ, ಈ ವಿಷಯ ಮುಂದುವರಿದರೆ, ನಾನು ರಾಜಕೀಯ ನಿವೃತ್ತಿ ಪಡೆಯಬಹುದು. ಈ ಕಾರಣಕ್ಕಾಗಿ ನಾನು ರಾಷ್ಟ್ರ ಮತ್ತು ದೇಹವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಆದರೆ ನಾನು ಹುಟ್ಟಿದ ಈ ದೇಶದಲ್ಲಿ ಸಾಯಲು ನಾನು ಬಯಸುತ್ತೇನೆ. ನಮ್ಮ ಜೈನ ಸಮುದಾಯದಲ್ಲಿ ಸಲ್ಲೇಖನ ವ್ರತವನ್ನು ಆಯ್ಕೆ ಮಾಡುವ ಕಾನೂನುಬದ್ಧ ಹಕ್ಕುಯಿದೆ. ನಾನು ಈ ತಪ್ಪನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ'' ಎಂದರು.
"ನನ್ನ ಈ ಕ್ರಮವು ನನ್ನ ಪಕ್ಷವನ್ನು ಮುಜುಗರಕ್ಕೀಡುಮಾಡಿದರೆ, ನಾನು ತಟಸ್ಥನಾಗಿರುತ್ತೇನೆ. ನಾನು ಪಕ್ಷವನ್ನು ತೊರೆಯಲು ಸಹ ಸಿದ್ಧನಿದ್ದೇನೆ. ಈ ವಿಷಯದಲ್ಲಿ ಯಾರಾದರೂ ಪೊಲೀಸರಿಗೆ ದೂರು ನೀಡಿದರೆ, ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ" ಎಂದು ಕೂಡಾ ಅವರು ಹೇಳಿದರು.
ಈ ಮಧ್ಯೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಅವರು ಬಿಲ್ಲವ ಸಮುದಾಯಕ್ಕೆ ಕ್ಷಮೆಯಾಚಿಸುವಂತೆ ಅಧಿಕಾರಿ ಅವರಿಗೆ ನೋಟಿಸ್ ನೀಡಿದ್ದಾರೆ.
ಸುದರ್ಶನ್ ಅವರು ಅಧಿಕಾರಿ ಅವರಿಗೆ ನೀಡಿದ ನೋಟಿಸ್ನಲ್ಲಿ, ''ಐತಿಹಾಸಿಕ ವ್ಯಕ್ತಿಗಳು, ನಿರ್ದಿಷ್ಟ ಸಮುದಾಯದ ಮುಖಂಡರು ಅಥವಾ ಯಾವುದೇ ನಿರ್ದಿಷ್ಟ ಧರ್ಮದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಬಿಜೆಪಿ ನಿಮ್ಮ ಕೃತ್ಯವನ್ನು ಖಂಡಿಸುತ್ತದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಾನು ನಿಮಗೆ ಸೂಚಿಸುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ಬಿಲ್ಲವ ಸಮುದಾಯದ ಬಳಿ ಕ್ಷಮೆಯಾಚಿಸಬೇಕು'' ಎಂದು ಆದೇಶಿಸಿದ್ದಾರೆ.