ಮಧ್ಯಪ್ರದೇಶ, ಜು 11: ಮೃತದೇಹವನ್ನು ಸಾಗಿಸಲು ಆಸ್ಪತ್ರೆಯ ಸಿಬ್ಬಂದಿಗಳು ವಾಹನ ಸೌಲಭ್ಯ ನಿರಾಕರಿಸಿದ ಪರಿಣಾಮ ತಾಯಿಯ ಪಾರ್ಥಿವ ಶರೀರವನ್ನು ಮಗ ತನ್ನ ಬೈಕ್ನಲ್ಲಿ ಕುಳ್ಳಿರಿಸಿ ಬಿಗಿಯಾಗಿ ಕಟ್ಟಿಕೊಂಡು ಸಾಗಿಸಿದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಟಿಕಾಮ್ಗಡ ಜಿಲ್ಲೆಯಲ್ಲಿ ನಡೆದಿದೆ. ಮಸ್ತಾಪುರ ಗ್ರಾಮದ ಕುನ್ವಾರಿ ಭಾಯಿ ಮೃತ ಮಹಿಳೆ.
ಹಾವು ಕಡಿತಕ್ಕೆ ಒಳಗಾದ ಇವರನ್ನು ಮಗ ಸ್ಥಳೀಯ ಮೋಹನಗಡದಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಪ್ರಯತ್ನಿಸಿದರೂ ಆಕೆಯನ್ನು ಬದುಕುಳಿಸಲು ಸಾಧ್ಯವಾಗಿಲ್ಲ. ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಪೊಲೀಸರ ಸೂಚನೆಯಂತೆ ಶವದ ಮರಣೋತ್ತರ ಪರೀಕ್ಷೆ ಮಾಡಿಸಬೇಕಾಗಿತ್ತು. ಹೀಗಾಗಿ ಅಕೆಯ ಮಗನಾದ ರಾಜೇಶ್ ಮೃತದೇಹವನ್ನು 35 ಕಿ.ಮೀ. ದೂರದಲ್ಲಿರುವ ಟಿಕಾಮ್ಗಡ ಜಿಲ್ಲಾಕೇಂದ್ರಕ್ಕೆ ಸಾಗಿಸಬೇಕಾಗಿತ್ತು. ಆದ್ರೆ ಈ ಸಂದರ್ಭ ಮಾನವೀಯತೆಯನ್ನು ಮರೆತ ಆಸ್ಪತ್ರೆ ಅಧಿಕಾರಿಗಳು ಆತನಿಗೆ ಮೃತದೇಹ ಸಾಗಿಸಲು ವಾಹನ ನೀಡಲು ನಿರಾಕರಿಸಿದರು. ಬೇರೆ ಉಪಾಯವಿಲ್ಲದೆ ಆತ ಹಾಗೂ ಆತನ ಸಂಬಂಧಿ ತಾಯಿಯ ಮೃತದೇಹವನ್ನು ಬೈಕ್ಗೆ ಕಟ್ಟಿಕೊಂಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾನೆ.
ಜಿಲ್ಲಾಸ್ವತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಆತನ ಊರಾದ ಮಸ್ತಾಪುರ ಗ್ರಾಮಕ್ಕೆ ಸಾಗಿಸಲು ವಾಹನ ಸೌಲಭ್ಯ ನೀಡಿತ್ತು. ಇನ್ನು ಜಿಲ್ಲಾಧಿಕಾರಿ ಪ್ರಕಾರ ಆಕೆಗೆ ಹಾವು ಕಡಿದ ತಕ್ಷಣ ಆತ ಅಸ್ಪತ್ರೆಗೆ ಕರೆದೊಯ್ಯುವ ಮೊದಲು ದೇವಸ್ಥಾನಕ್ಕೆ ಸಾಗಿಸಿದ್ದ ಇದರ ಪರಿಣಾಮ ತಡವಾಗಿ ಆಕೆಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದಿದ್ದಾರೆ