ಕಾರ್ಕಳ, ಜು 11: ಕಾರ್ಕಳದಲ್ಲಿ ಜರಗಲಿರುವ ಚಾತುರ್ಮಾಸ ವೃತಾಚರಣೆಯ ಪ್ರಯುಕ್ತ ಪರಮ ಪೂಜ್ಯ 108 ಶ್ರೀ ವೀರಸಾಗರ ಮುನಿಮಹಾರಾಜರು ಪುರಪ್ರವೇಶಗೈದರು. ಚಾತುರ್ಮಾಸ ವೃತಾಚರಣೆ ಜೈನಧರ್ಮದ ಮಹತ್ವ ಪೂರ್ಣವಾದ ಪರ್ವ. ಈ ನಾಲ್ಕು ತಿಂಗಳಲ್ಲಿ ಜೈನ ಸಾಧುಗಳು ಒಂದೇ ಸ್ಥಳದಲ್ಲಿದ್ದುಕೊಂಡು ಧರ್ಮಾಚರಣೆ, ಆತ್ಮ ಸಾಧನೆ, ಧರ್ಮ ಪ್ರಭಾವನೆಯನ್ನು ಮಾಡುತ್ತಾರೆ.
ನಾಲ್ಕು ತಿಂಗಳ ಈ ಸಾಧನೆಯನ್ನು ವರ್ಷಾಯೋಗವೆಂದೂ ಹೇಳುತ್ತಾರೆ. ಜೈನಧರ್ಮ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ವರ್ಷಾಕಾಲದ ಈ ಅವಧಿಯಲ್ಲಿ ಉತ್ಪತ್ತಿಯಾಗುವ ಸಕಲ ಜೀವರಾಶಿಗೂ ಹಿಂಸೆಯಾಗಬಾರದು ಎನ್ನುವುದೇ ಇದರ ಉದ್ದೇಶ. ಆದ್ದರಿಂದಲೇ ದೂರದ ವಿಹಾರವನ್ನು ಮಾಡದೆ ಆತ್ಮ ಸಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸೇರಿದ ಪುಲ್ಕೇರಿ ಬೈಪಾಸ್ನ ಕುಸುಮದ ಮನೆಯಲ್ಲಿ ಶ್ರೀಗಳು ಆಹಾರ ಸೇವನೆ ಮಾಡಿದರು. ಧಾರ್ಮಿಕ ವಿಧಿವಿಧಾನ ಮೂಲಕ ಪೂಜ್ಯ ಮುನಿಶ್ರೀಗಳನ್ನು ಮಂಗಳ ವಾದ್ಯದೊಂದಿಗೆ ಆನೆಕೆರೆ ಮಾರ್ಗವಾಗಿ ಶ್ರೀ ಜೈನ ಮಠಕ್ಕೆ ಭವ್ಯ ಮೆರವಣಿಗೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿದರು.