ಕಲ್ಲಡ್ಕ,ಸೆ28: ಮೂರು ತಿಂಗಳ ಹಿಂದೆ ಕಲ್ಲಡ್ಕದಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಿಥುನ್ ಹಾಗೂ ಯತಿನ್ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇನ್ನು ಹೆಚ್ಚಿನ ವಿಚಾರಣೆಗಾಗಿ ಮಿಥುನ್ ಮತ್ತು ಯತಿನ್ನನ್ನು ಪೊಲೀಸರ ನಿವೇದನೆಯ ಮೇರೆಗೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಮೇ 25 ರಂದು ಹಾಸಿರ್ ಎಂಬಾತನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಥುನ್ ಹಾಗೂ ಯತಿನ್ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ನಂತರ ಇವರಿಬ್ಬರು ತಲೆಮರೆಸಿಕೊಂಡಿದ್ದರು. ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಆರೋಪಿಗಳು ಇಂದು ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.