ಜು,11: ಭಾರತದ ಮಾಜಿ ರಾಷ್ಟಪತಿ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾದ ಪ್ರಣಬ್ ಮುಖರ್ಜಿ ಅವರನ್ನು ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸುದ್ದಿಯಾಗಿದ್ದ ಆರ್ ಎಸ್ ಎಸ್ ಇದೀಗ ಮತ್ತೊಮ್ಮೆ ತನ್ನ ನಡೆಯ ಮೂಲಕ ಎಲ್ಲರನ್ನು ದಂಗುಬಡಿಸಿದೆ. ತನ್ನ ಹೊಸ ಐತಿಹಾಸಿಕ ನಿರ್ಣಾಯದ ಮೂಲಕ ಎಲ್ಲರನ್ನು ಚಕಿತರನ್ನಾಗಿ ಮಾಡಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಅಯೋಧ್ಯೆ ಪಟ್ಟಣದ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗೂ ಇಸ್ಲಾಂ ಪವಿತ್ರ ಗ್ರಂಥ ಕುರಾನ್ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಈ ನಡೆ ರಾಷ್ಟ್ರ ವ್ಯಾಪ್ತಿ ಸಂಚಲನವನ್ನುಂಟು ಮಾಡಿದ್ದು, ಕಾರ್ಯಕ್ರಮವು ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಿದೆ ಎಂದು ಆರ್ ಎಸ್ ಎಸ್ ಹೇಳಿಕೊಂಡಿದೆ. ಜುಲೈ 12 ರಂದು ಆರ್ಎಸ್ಎಸ್ ನ ಮುಸ್ಲಿಮ್ ವಿಭಾಗವಾದ ರಾಷ್ಟ್ರೀಯ ಮುಸ್ಲಿಂ ಮಂಚ್ ನ ಸಹಭಾಗಿತ್ವದಲ್ಲಿ, ಸರಯೂ ನದಿ ತಟದಲ್ಲಿರುವ ರಾಮ್ ಕಿ ಪೈದಿ ಘಾಟ್ ನಲ್ಲಿ ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ.
ಕಾರ್ಯಕ್ರಮದಲ್ಲಿ ಹಿಂದೂ ಭಕ್ತರ ಜೊತೆಗೆ ಸುಮಾರು 1,500 ಮುಸ್ಲಿಮ್ ಉಲೇಮಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಲೇಮಾಗಳು ಮೊದಲಿಗೆ ನಮಾಜ್ ನೆರವೇರಿಸಿ ಬಳಿಕ ಪವಿತ್ರ ಕುರಾನ್ ಶ್ಲೋಕಗಳನ್ನು 5 ಲಕ್ಷ ಬಾರಿ ಪಠಿಸುವರು ಎನ್ನಲಾಗಿದ್ದು ಬಳಿಕ 200 ಉಲೇಮಾಗಳು ಸೂಫಿ ಸಂತರ ಸಮಾಧಿಗಳಿಗೆ ಭೇಟಿ ನೀಡಲಿದ್ದಾರೆ. ಆರ್ಎಸ್ಎಸ್ ತಾನು ಮುಸ್ಲಿಂ ವಿರೋಧಿ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಬೆಂಬಲ ಸೂಚಿಸಿದೆ.