ಕೋಟ, ಜು 11 : ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದೇ ಇವತ್ತಿನ ಬಹುದೊಡ್ಡ ಸಂಗತಿಯಾಗಿರುವ, ಶಾಲೆಯೂ ಉಳಿಯಬೇಕು ಮಕ್ಕಳು ಬೆಳೆಯಬೇಕು, ಎಂದು ಕಲಿಯುಗದ ದ್ರೋಣಾಚಾರ್ಯರಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಯಾವ ಸ್ವಾರ್ಥವೂ ಇಲ್ಲದೆ ದುಡಿಯುತ್ತಿರುವ ಶಿಕ್ಷಕರೊಬ್ಬರು ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. ಅವರೇ ಉಡುಪಿ ಬ್ರಹ್ಮಾವರ ತಾಲೂಕಿನ ಬಾರಾಳಿ ಎಂಬ ಹಳ್ಳಿಯ ರಾಜಾರಾಮ್ ಎನ್ನುವ ಶಿಕ್ಷಕ.
ಬಾರಾಳಿ ಶಾಲೆಯಲ್ಲಿ ಕೂಡಾ ಮಕ್ಕಳ ಸಂಖ್ಯೆ ಕುಸಿತಗೊಂಡಾಗ ಶಿಕ್ಷಕ ರಾಜಾರಾಮ್ ಅವರು ಮಕ್ಕಳ ಸಂಖ್ಯೆ ಹೆಚ್ಚಳ ಮಾಡುವ ಬಗ್ಗೆ ಏನಾದರೂ ಮಾಡಬೇಕು ಎಂದು ಹಳೆ ವಿದ್ಯಾರ್ಥಿಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಕಳೆದ ವರ್ಷ ಉದ್ಯಮಿ ವಿಜುನಾಥ್ ಹೆಗಡೆ ಅವರು ಶ್ರೀರಾಮ ಸೇವಾ ಸಮಿತಿಯ ಮೂಲಕ ಶಾಲೆಗೆ ಬಸ್ನ್ನು ಕೊಡುಗೆಯಾಗಿ ನೀಡಿದಾಗ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗ ತೊಡಗಿತು. 60 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 90ರ ಗಡಿ ದಾಟಿತು.
ಇದಕ್ಕೆ ಕಾರಣವಾಗಿದ್ದು, ಶಿಕ್ಷಕ ಎನ್ನುವ ಹಮ್ಮು ಬಿಮ್ಮು ಗಳೆನ್ನದೆ ಶಾಲಾ ಬಸ್ನ ಚಾಲಕರಾಗಿ ಕಾರ್ಯನಿರ್ವಹಿಸಿದ ರಾಜಾರಾಮ ಅವರು.ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜಾರಾಮ್ ಅವರು ಮೂಲತಃ ಹೆಬ್ರಿಯವರು. ಅವರು ಇಷ್ಟಪಟ್ಟು ಸೇರಿದ ವೃತ್ತಿಯಲ್ಲಿ ವೃತ್ತಿಧರ್ಮವನ್ನು ಎಂದೂ ನಿರ್ಲಕ್ಷ್ಯ ಮಾಡಿದವರಲ್ಲ. ದೈಹಿಕ ಶಿಕ್ಷಣ ಜೊತೆ ಜೊತೆಗೆ ಗಣಿತ, ವಿಜ್ಞಾನ ಪಾಠವನ್ನು ಮಾಡುತ್ತಾರೆ. ದಿನ ಮುಂಜಾನೆ 6 ಗಂಟೆಗೆ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಲು ಆರಂಭಿಸುವ ಇವರು ನಂತರ 8 ಗಂಟೆಗೆ ಬಸ್ನ ಚಾಲಕನ ಸೀಟ್ನಲ್ಲಿ ಕುಳಿತು ಮಕ್ಕಳನ್ನು ಕರೆತರಲು ತೆರಳುತ್ತಾರೆ. ಶಿರಿಯಾರ, ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು, ಕಾರ್ತಿಬೆಟ್ಟು, ಕಾಜ್ರಳ್ಳಿ ಮುಂತಾದ ಭಾಗಗಳಿಂದ ಬಸ್ನಲ್ಲಿ ವಿದ್ಯಾರ್ಥಿಗಳನ್ನು ಕರೆತರುತ್ತಾರೆ. ಶಾಲೆಯ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಅವರು ಕರೆತರುತ್ತಾರೆ.
ಶಿಕ್ಷಕ ವೃತ್ತಿ ಪವಿತ್ರ ಹಾಗೂ ಪೂಜಾರ್ಹವಾದುದು ಎನ್ನುವುದಕ್ಕೆ ರಾಜಾರಾಮ್ ರಂಥಹ ಶಿಕ್ಷಕರು ನಿದರ್ಶನರಾಗುತ್ತಾರೆ. ಮಕ್ಕಳನ್ನು ಜಾಗೃತೆಯಿಂದ ಶಾಲೆಯಿಂದ ಮನೆಗೂ, ಮನೆಯಿಂದ ಶಾಲೆಗೂ ಕರೆತರುವ ಇವರು ಬಸ್ ಏರಿದರೆ ಜವಾಬ್ದಾರಿಯುತ ಚಾಲಕ, ಬಸ್ ಇಳಿದರೆ ಉತ್ತಮ ಕ್ರೀಡಾಳುಗಳ ಸೃಷ್ಟಿಸುವ ದೈಹಿಕ ಶಿಕ್ಷಣ ಶಿಕ್ಷಕರಾಗುತ್ತಾರೆ.