ಬೆಳ್ತಂಗಡಿ, ಜು 11: ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿಅತ್ಯಾಚಾರಗೈದಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಸಂಭವಿಸಿದ್ದು ವೇಣೂರು ಪೋಲೀಸರು ಆರೋಪಿಗಳ ವಿರುದ್ದಅತ್ಯಾಚಾರ ಹಾಗೂ ಫೋಕ್ಸೋ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾಗಿರುವ ಮಾಳ ನಿವಾಸಿ ಶರತ್ (21) ಹಾಗೂ ಸುಲ್ಕೇರಿ ನಿವಾಸಿ ಪ್ರಕಾಶ್ (23) ಎಂಬವರನ್ನು ವೇಣೂರು ಪೋಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈದುಗ್ರಾಮದ ನಿವಾಸಿಗಳಾಗಿರುವ 17ರ ಹಾಗೂ 15 ರ ಹರೆಯದ ಸಹೋದರಿಯರಿಬ್ಬರು ಸುಲ್ಕೇರಿಯಲ್ಲಿರುವ ಚಿಕ್ಕಪ್ಪನ ಮನೆಯಲ್ಲಿದ್ದು ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ದೂರದ ಸಂಬಂಧಿಕರಾಗಿರುವ ಇಬ್ಬರುಯುವಕರು ಸುಲ್ಕೇರಿಯ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಇವರು ಅಪ್ರಾಪ್ತ ಬಾಲಕಿಯರಲ್ಲಿ ತೀರಾ ಸಲುಗೆ ಬೆಳೆಸಿಕೊಂಡಿದ್ದಾರೆ ಹಾಗೂ ಯುವಕರು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಈ ಯುವತಿಯರನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಸಹೋದರಿಯವರ ತಂದೆ ತಮ್ಮನ ಮನೆಗೆ ಮಕ್ಕಳನ್ನು ನೋಡಲು ಬಂದಾಗ ಪುತ್ರಿಯರು ಮನೆಯಲ್ಲಿ ಇರಲಿಲ್ಲ. ಸಂಶಯಗೊಂಡು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಬಾಲಕಿಯರನ್ನು ಕರೆಸಿಕೊಂಡು ಮಾಹಿತಿ ಪಡೆದು ಬಳಿಕ ಇವರನ್ನು ಆರೋಗ್ಯ ತಪಾಸಣೆ ನಡೆಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ತಂದೆ ನೀಡಿರುವ ದೂರಿನಂತೆ ಪೊಲೀಸರು ಅತ್ಯಾಚಾರ ಹಾಗೂ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ದೈಹಿಕ ಹಲ್ಲೆಗೊಳಗಾದವರಲ್ಲಿ ೧೭ ರ ಬಾಲಕಿ ಗರ್ಭಿಣಿಯಾಗಿರುವುದಾಗಿಯೂ ತಿಳಿದು ಬಂದಿದೆ. ಮತ್ತೊಬ್ಬಾಕೆಯನ್ನು ಚೈಲ್ಡ್ಲೈನ್ ವಶಕ್ಕೆ ಒಪ್ಪಿಸಲಾಗಿದೆ.