ಉಡುಪಿ, ಫೆ.10 (DaijiworldNews/MB) : ''ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಸಂಗ್ರಹಿಸಿದ ಮೊತ್ತವು 1,000 ಕೋಟಿ ರೂ.ಗಳನ್ನು ಮೀರಿದೆ'' ಎಂದು ಫೆಬ್ರವರಿ 9 ಮಂಗಳವಾರ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, "ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಹಿಂದೂ ಸಮಾಜದ ಐಕ್ಯತೆಯ ದೃಷ್ಟಿಯಿಂದ ಎಲ್ಲಾ ವರ್ಗದ ಜನರ ದೇಣಿಗೆ ಒಂದು ಪ್ರಮುಖ ಬೆಳವಣಿಗೆಯಾಗಿದೆ" ಎಂದು
"ನಮ್ಮ ಗುರಿ ಕೇವಲ ರಾಮ ಮಂದಿರವನ್ನು ನಿರ್ಮಿಸುವುದಲ್ಲ. ನಮ್ಮ ಆದ್ಯತೆ ರಾಮ ರಾಜ್ಯವನ್ನು ಸ್ಥಾಪಿಸುವುದು" ಎಂದು ಕೂಡಾ ಹೇಳಿದರು.
"ರಾಜ್ಯದ ಎಲ್ಲಾ ದೇವಾಲಯಗಳ ಸುತ್ತಲಿನ ಭೂಮಿಯನ್ನು ಕಾಯ್ದಿರಿಸಿ, ರಕ್ಷಿಸಲಾಗಿದೆ ಎಂದು ಖಾತರಿಪಡಿಸಬೇಕು. ಇದರೊಂದಿಗೆ ಇತರ ಧರ್ಮದ ಜನರು ಅತಿಕ್ರಮಣ ಮಾಡುವುದನ್ನು ತಡೆಯಬಹುದು. ಭವಿಷ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಇದು ಅವಶ್ಯಕವಾಗಿದೆ" ಎಂದರು.
''ಧರ್ಮದ ಆಧಾರದ ಮೇಲೆ ಮೀಸಲಾತಿ ಸರಿಯಿಲ್ಲ'' ಎಂದು ಹೇಳಿದ ಅವರು, "ಧಾರ್ಮಿಕ ಮುಖಂಡರು ತಮ್ಮ ಸಮುದಾಯದ ಬಡವರ ಧ್ವನಿಯಾಗಿರಬೇಕು. ಹಿಂದುಳಿದ ವರ್ಗದಲ್ಲಿ ಅನುಕೂಲಸ್ಥರು ಮಾತ್ರ ಮೀಸಲಾತಿ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹಿಂದುಳಿದ ವರ್ಗದ ಅನೇಕ ಜನರು ನನ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ'' ಎಂದು ಹೇಳಿದರು.
ದೆಹಲಿ ಗಡಿ ಮತ್ತು ಇತರ ಭಾಗಗಳಲ್ಲಿ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, "ರೈತರು ಹಕ್ಕುಗಳ ಆಧಾರದ ಮೇಲೆ ಪ್ರತಿಭಟನೆ ನಡೆಸುವುದು ಸರಿಯಾಗಿದೆ. ಆದರೆ ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶಗಳನ್ನು ಒದಗಿಸಿದ ಬಳಿಕವೂ ಪ್ರತಿಭಟನೆ ಮುಂದುವರಿಸುವುದು, ಸಾಮಾನ್ಯ ಜೀವನಕ್ಕೆ ಅಡ್ಡಿಯಾಗುವುದು ತಪ್ಪು. ರಾಷ್ಟ್ರದ ಸಾರ್ವಭೌಮತೆಗೆ ಯಾವುದೇ ಸವಾಲು ಎದುರಾದರೂ ನಾವು ಖಂಡಿಸುತ್ತೇವೆ" ಎಂದು ಹೇಳಿದರು.
ಹಾಗೆಯೇ ಕಲ್ಸಂಕದಲ್ಲಿರುವ ವೃತ್ತಕ್ಕೆ 'ಜಗದ್ಗುರು ಮಧ್ವಾಚಾರ್ಯ ವೃತ್ತ' ಎಂದು ಹೆಸರಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.