ಉಳ್ಳಾಲ, ಫೆ. 10 (DaijiworldNews/SM): ಅಪರಿಚಿತ ವ್ಯಕ್ತಿಯೋರ್ವರು ನೇತ್ರಾವತಿ ನದಿ ತೀರದ ರೈಲ್ವೇ ಹಳಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ವೇಳೆ ನಡೆದಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಮೃತದೇಹ ಸಮೀಪದಲ್ಲೇ ಪತ್ತೆಯಾಗಿದೆ.

ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸಂಜೆ 5.30ರ ಸುಮಾರಿಗೆ ರೈಲ್ವೇ ಹಳಿಯಲ್ಲಿ ನಿಂತು ನದಿಗೆ ಹಾರುವುದನ್ನು ಸೇತುವೆಯಲ್ಲಿದ್ದ ವಾಹನ ಸವಾರರು ಗಮನಿಸಿದ್ದರು. ಇದರಿಂದ ಸೇತುವೆಯುದ್ದಕ್ಕೂ ವಾಹನ ಸವಾರರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಹಾರಿದ ಕೆಲವೇ ಕ್ಷಣಗಳಲ್ಲಿ ಮೃತದೇಹವು ನೀರಿನಲ್ಲಿ ಗೋಚರಿಸಿದ್ದು, ಇದನ್ನು ಗಮನಿಸಿದ ಹೆಲ್ಪ್ ಇಂಡಿಯಾ ಫೌಂಡೇಷನ್ ನ ರಾಝಿಕ್ ಉಳ್ಳಾಲ್ ಅವರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಅಗ್ನಿ ಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿ ನದಿಗೆ ಹಾರಿದ ತಕ್ಷಣ ಹೃದಯಾಘಾತ ಆಗಿರುವುದರಿಂದ ಮೃತದೇಹ ತೇಲಿರುವ ಸಾಧ್ಯತೆ ಇದೆ. ಇದರಿಂದಾಗಿ ಸಮುದ್ರ ಸೇರುವ ಬದಲು ನದಿಯಲ್ಲೇ ಉಳಿದಿದೆ ಅನ್ನುವುದು ಸ್ಥಳೀಯರ ಅಭಿಪ್ರಾಯ. 50ರ ಹರೆಯದ ವ್ಯಕ್ತಿಯಾಗಿದ್ದು, ಕೈಯಲ್ಲಿ ಕೆಥೋಲಿಕ್ ಸಮುದಾಯಕ್ಕೆ ಸೇರಿ ಕುರುಹುಗಳು ಕಂಡುಬಂದಿವೆ.