ಬಂಟ್ವಾಳ, ಫೆ. 10 (DaijiworldNews/SM): ಭಾರೀ ಕುತೂಹಲ ಮೂಡಿಸಿದ್ದ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಆ ಮೂಲಕ ಸಮಬಲವಾಗಿದ್ದ ವೀರಕಂಭ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ವೀರಕಂಭ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿತ್ತು.
ಸಮಬಲವಾಗಿದ್ಧ ವೀರಕಂಭ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ದಿನೇಶ್ ಹಾಗೂ ಕಾಂಗ್ರೇಸ್ ಬೆಂಬಲಿಗ ರಘು ಇಬ್ಬರು ಸ್ಪರ್ಧೆ ಮಾಡಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೀಲಾ ವೇಗಸ್ ಹಾಗೂ ಬಿಜೆಪಿ ಬೆಂಬಲಿತ ಜಯಂತಿ ಪೂಜಾರಿ ಸ್ಪರ್ದೆ ಮಾಡಿದ್ದರು. ಕಾಂಗ್ರೆಸ್ ಬೆಂಬಲಿತೆ ಅಭ್ಯರ್ಥಿಯಾಗಿ ಶೀಲಾ ವೇಗಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಿಂದ ಅಡ್ಡಮತದಾನ
ಸಮಬಲವಾಗಿದ್ದ ವೀರಕಂಭ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಅಡ್ಡಮತದಾನ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗುವಂತಾಗಿದೆ.
ಬೆಳಿಗ್ಗೆ ಬಿಜೆಪಿ ಸಂಜೆ ಕಾಂಗ್ರೇಸ್!
ಸಮಬಲವಾಗಿದ್ದ ವೀರಕಂಭ ಗ್ರಾ.ಪಂ.ನಲ್ಲಿ ಅಧಿಕಾರವನ್ನು ಪಡೆಯಲು ಎರಡು ರಾಜಕೀಯ ಪಕ್ಷಗಳ ಕಸರತ್ತುಗಳು ತೆರೆಮರೆಯಲ್ಲಿ ನಡೆದಿತ್ತು. ಹಾಗಾಗಿ ಗೆದ್ದ ಅಭ್ಯರ್ಥಿಗಳ ಕುದುರೆ ವ್ಯಾಪಾರ ವಹಿವಾಟು ಕೂಡ ನಡೆದಿತ್ತು. ಬಿಜೆಪಿ ಅಧಿಕಾರಕ್ಕೆ ಬರುವ ಹಿನ್ನೆಲೆಯಲ್ಲಿ ವೀರಕಂಭ ಗ್ರಾಮ ಪಂಚಾಯತ್ ಕಾಂಗ್ರೇಸ್ ಬೆಂಬಲಿತೆ ಮಹಿಳಾ ಅಭ್ಯರ್ಥಿಯೋರ್ವರನ್ನು ಬಿಜೆಪಿಗೆ ಧ್ವಜ ನೀಡಿ ಶಾಸಕರ ಸಮ್ಮುಖದಲ್ಲಿ ಸೇರ್ಪಡೆ ಮಾಡಿತ್ತು.
ಆದರೆ ಸಂಜೆಯಾಗುತ್ತಿದ್ದಂತೆ ಮತ್ತೆ ಅ ಮಹಿಳಾ ಅಭ್ಯರ್ಥಿ ಕಾಂಗ್ರೇಸ್ ಧ್ವಜವನ್ನು ಹಿಡಿದು ಮಾಜಿ ಶಾಸಕರ ಸಮ್ಮುಖದಲ್ಲಿ ಸೇರ್ಪಡೆ ಮಾಡಲಾಗಿತ್ತು. ಬಳಿಕ ಆ ಮಹಿಳಾ ಅಭ್ಯರ್ಥಿಯ ಮನೆಯ ಮುಂದೆ ಓರ್ವ ಪೋಲೀಸ್ ನೇಮಕ ಮಾಡಲಾಗಿತ್ತು. ಇಂದು ಮತದಾನಕ್ಕೆ ಬರುವ ವೇಳೆಯೂ ಮಹಿಳಾ ಅಭ್ಯರ್ಥಿಯನ್ನು ಭದ್ರತೆಯಲ್ಲಿ ಕರೆದುಕೊಂಡು ಬರಲಾಗಿತ್ತು. ಆದರೆ ಇಷ್ಟೆಲ್ಲಾ ನಾಟಕೀಯ ಬೆಳವಣಿಗೆಯ ಮಧ್ಯೆಯೂ ಅಡ್ಡಮತದಾನ ಮಾಡಿದ್ದಾರೆ.