ಕುಂದಾಪುರ, ಜು 12: ತರ್ಗಸೆ ಗ್ರಾಮದ ಭೂಸಕ್ರಡಿಯಲ್ಲಿನ ಅರಣ್ಯತಪ್ಪಲು ಪ್ರದೇಶಗಳಿಗೆ ಮೇಯಲು ಎಂಬಲ್ಲಿ ಮೇಯಲು ಬಿಟ್ಟಿದ್ದ ಏಳು ದನಗಳು ನಿಗೂಢವಾಗಿ, ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಪಶುಸಂಗೋಪನಾ ಇಲಾಖೆ ಸಹಾಯಕ ಉಪನಿರ್ದೇಶಕ ಡಾ. ಶಂಕರ ಶೆಟ್ಟಿ ಹಾಗೂ ಬೈಂದೂರು ವೃತ ನಿರೀಕ್ಷಕ ಪರಮೇಶ್ವರ ಗುನಗ ಸ್ಥಳ ಪರಿಶೀಲನೆ ನಡೆಸಿದರು.
ಕಿಡಿಗೇಡಿಗಳು ಹಲಸಿನ ಹಣ್ಣಿನಲ್ಲಿ ವಿಷಪ್ರಾಷನ ಮಾಡಿ ಜಾನುವಾರುಗಳಿಗೆ ತಿನ್ನಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸುತ್ತಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಎರಡು ದನಗಳ ಕಳೇಬರ ಹಾಗೂ ದಫನ ಮಾಡಿದ ಒಂದು ದನದ ಕಳೆಬರವನ್ನು ಮೇಲಕ್ಕೆತ್ತಿ ಅಧಿಕಾರಿಗಳು ಪರಿಶೀಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪಶು ಸಂಗೋಪನಾ ಇಲಾಖೆ ಸಹಾಯಕ ಉಪನಿರ್ದೇಶಕ ಡಾ. ಶಂಕರ ಶೆಟ್ಟಿ, " ಸತ್ತ ಜಾನುವಾರುಗಳ ಪೈಕಿ ಒಂದರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೊಟ್ಟೆಯೊಳಗೆ ಹಲಸಿನ ಹಣ್ಣು ಸಹಿತ ಯಾವುದೇ ವಸ್ತು ಪತ್ತೆಯಾಗಿಲ್ಲ. ಕೆಲವು ಬಿಳಿಯ ಕಾಳುಗಳಷ್ಟೇ ಪತ್ತೆಯಾಗಿದೆ. ಇವುಗಳನ್ನು ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ" ಎಂದಿದ್ದಾರೆ.
ಇನ್ನು ಈ ಸಂದರ್ಭ ಮಾತನಾಡಿದ ಸರ್ಕಲ್ ಇನ್ಸ್ ಪೆಕ್ಟರ್ ಪರಮೇಶ್ವರ್ ಮರಣೋತ್ತರ ವರದಿಯಲ್ಲಿ ದನಗಳಿಗೆ ವಿಷ ಉಣಿಸಿ ಬಗ್ಗೆ ಕಂಡು ಬಂದರೆ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃತ್ಯದ ಹಿಂದಿರುವ ಕಾಣದ ದ ಕೈಗಳನ್ನು ಪೊಲೀಸರು ಪತ್ತೆ ಮಾಡಬೇಕು. ಮೂಕ ಪ್ರಾಣಿಗಳ ಸಾವಿಗೆ ನ್ಯಾಯ ದೊರಕಿಸುವ ತನಕ ಎಲ್ಲಾ ಪ್ರಯತ್ನ ಮಾಡಲಾಗುವುದು . ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಾಲೂಕು ಕಿಸಾನ್ ಘಟಕದ ಅಧ್ಯಕ್ಷ ವೀರಭದ್ರ ಗಾಣಿಗ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬೈಂದೂರು ತಗ್ಗರ್ಸೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಾಲಂಬೇರು ಭೂಸಕ್ರಡಿ ನಿವಾಸಿಗಳಾದ ದಲಿತ ಸಮುದಾಯದ ಸೋಮಶೇಖರ ಎಂಬವರ ಮನೆಯ ಎರಡು ಗಬ್ಬದ ದನ ಹಾಗೂ ಒಂದು ಕರು ಮೃತಪಟ್ಟರೆ, ವಸಂತ ಗಾಣಿಗರ ಒಂದು ಕರು, ಶ್ರೀನಿವಾಸ ಗಾಣಿಗ ಎಂಬವರ ಮನೆಯ ಒಂದು ದನ ಮತ್ತು ಹೊಸೇರಿ ಭಾಗದ ಎರಡು ದನಗಳು ಅಸುನೀಗಿತ್ತು.