ಮಂಗಳೂರು, ಫೆ.11(DaijiworldNews/HR): ಖಾಸಗಿ ಕಾಲೇಜಿವೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡುತ್ತಿದ್ದ ಆರೋಪದಡಿ 11 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.



ಬಂಧಿತರನ್ನು ಮೊಹಮ್ಮದ್ ಶಮಾಸ್, ಅವಿನ್ ಜೋಯ್, ರಾಬಿನ್ ಬಿಜು, ಜೆರಾನ್ ಸಿರಿಲ್, ಜಬಿನ್ ಮಹರೂಫ್, ಮೊಹಮ್ಮದ್ ಸೂರಜ್, ಜಫಿನ್, ಅಬ್ದುಲ್ ಬಸಿತ್, ಆಶಿನ್ ಬಾಬು, ಅಬ್ದುಲ್ ಅನಾಸ್ ಮೊಹಮ್ಮದ್, ಅಕ್ಷಯ್ ಕೆ.ಎಸ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೇರಳ ಮೂಲದವರಾಗಿದ್ದಾರೆ.
ಕಾಲೇಜಿನ ಫಿಸಿಯೋಥೆರಪಿ ಮತ್ತು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದ ಐವರು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿದ್ದು, ಗಡ್ಡ- ಮೀಸೆ ಬೋಳಿಸಬೇಕು, ಪೊಟ್ಟಣದಲ್ಲಿರುವ ಬೆಂಕಿ ಕಡ್ಡಿಗಳನ್ನು ಎಣಿಸಬೇಕು ಎಂದು ಕಿರುಕುಳ ನೀಡಿದ್ದು, ದೈಹಿಕವಾಗಿ ಕೂಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, "ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯನ್ನು ಸಂಪರ್ಕಿಸಿದರು, ಅವರು ಪೊಲೀಸ್ ದೂರು ದಾಖಲಿಸಿದ್ದು, ಈ ಸಂಬಂಧ 18 ವಿದ್ಯಾರ್ಥಿಗಳನ್ನು ವಿಚಾರಿಸಿದ ನಂತರ ನಾವು 11 ಜನರನ್ನು ಬಂಧಿಸಿದ್ದೇವೆ" ಎಂದು ಹೇಳಿದರು.
ಶಿಕ್ಷಣ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಇತರ ಐಪಿಸಿ ವಿಭಾಗಗಳ ಅಡಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನು "ಇಂತಹ ಘಟನೆಗಳ ಬಗ್ಗೆ ಎಚ್ಚರದಿಂದಿರಲು ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸಿದ ಆಯುಕ್ತರು, ಶಿಕ್ಷಣ ಸಂಸ್ಥೆಗಳು, ಅಧಿಕಾರಿಗಳು, ಅಧ್ಯಾಪಕರು, ಮಾರ್ಗದರ್ಶಕರು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು" ಎಂದು ತಿಳಿಸಿದ್ದಾರೆ.
"ಯಾವುದೇ ವಿದ್ಯಾರ್ಥಿಯು ಕಿರುಕುಳವನ್ನು ಎದುರಿಸುತ್ತಿದ್ದರೆ ಮತ್ತು ಕಾಲೇಜು ಅಧಿಕಾರಿಗಳು ಅಥವಾ ಅಧ್ಯಾಪಕರನ್ನು ಸಂಪರ್ಕಿಸಲು ಹಿಂಜರಿಯುತ್ತಿದ್ದರೆ ಅಂತಹ ವಿದ್ಯಾರ್ಥಿಗಳು ಮಾಹಿತಿಯನ್ನು ಹಂಚಿಕೊಳ್ಳಲು ನನ್ನ ಕಚೇರಿಯನ್ನು ಸಂಪರ್ಕಿಸಬಹುದು" ಎಂದು ಶಶಿ ಕುಮಾರ್ ಹೇಳಿದರು.
"ರ್ಯಾಗಿಂಗ್ನಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಹಲವಾರು ಉದಾಹರಣೆಗಳಿವೆ ಎಂದ ಅವರು, ಮಂಗಳೂರು 8 ವೈದ್ಯಕೀಯ ಕಾಲೇಜುಗಳು, 12 ಎಂಜಿನಿಯರಿಂಗ್ ಕಾಲೇಜುಗಳು, 30 ವೃತ್ತಿಪರ ಕೋರ್ಸ್ಗಳು, 900 ಶಾಲೆಗಳು ಮತ್ತು ಕಾಲೇಜುಗಳು ಮತ್ತು 2 ಲಕ್ಷ ವಿದ್ಯಾರ್ಥಿಗಳನ್ನು ಹೊಂದಿರುವ ಶೈಕ್ಷಣಿಕ ಕೇಂದ್ರವಾಗಿದೆ, ಆದ್ದರಿಂದ ಇಂತಹ ರ್ಯಾಗಿಂಗ್ ಪ್ರಕರಣಗಳನ್ನು ನಾವು ಸಹಿಸಲಾರೆವು. ಕಾನೂನಿನ ವ್ಯಾಪ್ತಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಿ" ಎಂದು ಹೇಳಿದ್ದಾರೆ.