ಉಡುಪಿ, ಫೆ.11 (DaijiworldNews/PY): ಲಯನ್ಸ್ ಕ್ಲಬ್ ಉಡುಪಿ ಜಿಲ್ಲೆ 317 ಸಿ ಮತ್ತು ಉಡುಪಿ ಸಂಚಾರ ಪೋಲಿಸ್, ಉಡುಪಿ ಪೋಲಿಸ್ ಸಹಕಾರದೊಂದಿಗೆ ಲಯನ್ಸ್ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಕಾರ್ಯಕ್ರಮವು ಉಡುಪಿಯ ಒಳಕಾಡು ಪ್ರೌಢಶಾಲೆಯಲ್ಲಿ ಜರುಗಿತು.





ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಪೋಲಿಸ್ ವೃತ್ತ ನಿರೀಕ್ಷಕರಾದ ಮಂಜುನಾಥ್ ಅವರು, "ಸರಕಾರವು ವಿದ್ಯಾರ್ಥಿಗಳ ವಿದ್ಯಾರ್ಜನೆ ಮತ್ತು ಇತರ ಖರ್ಚು ವೆಚ್ಚಗಳಿಗೆ ಹೆತ್ತವರಿಗಿಂತ ಶೇ.100ರಷ್ಟು ಹೆಚ್ಚು ಖರ್ಚು ಮಾಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಈ ದೇಶದ ಆಸ್ತಿ. ಶೇ. 80ಕ್ಕಿಂತ ಅಧಿಕ ಅಪಘಾತಗಳು ಚಾಲಕರ ನಿರ್ಲ್ಯಕ್ಷ್ಯದಿಂದ ಸಂಭವಿಸುತ್ತವೆ. ಪ್ರತಿ ರಸ್ತೆ ಅಪಘಾತದಲ್ಲಿ ಆಗುವ ಸಾವಿನಿಂದ ದೇಶ ಕೂಡಾ ನಷ್ಟ ಅನುಭವಿಸುತ್ತದೆ. ಲೈಸನ್ಸ್ ರಹಿತ ಚಾಲನೆಯಿಂದ ಅಪಘಾತ ಸಂಭವಿಸಿ ವ್ಯಕ್ತ ಮೃತಪಟ್ಟಲ್ಲಿ ಮೃತಪಟ್ಟ ವ್ಯಕ್ತಿಗೆ ವಾಹನದ ಮಾಲಿಕ ತನ್ನ ಸ್ವಂತ ಹಣದಿಂದ ಿನ್ಶೂರೆನ್ಸ್ ಮೊತ್ತವನ್ನು ನೀಡಬೇಕಾಗುತ್ತದೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ ಯಾವತ್ತೂ ಮಾಡಬಾರದು. ದೇಹದ ಯಾವುದೇ ಭಾಗ ಕೊನೆಗೊಂಡರೂ ಸರಿಪಡಿಸಬಹುದು. ಆದರೆ, ತಲೆಯ ಭಾಗಕ್ಕೆ ಅಪಘಾತದಲ್ಲಿ ಪೆಟ್ಟಾದಲ್ಲಿ ಸರಿ ಪಡಿಸುವ ಯಾವ ವಿಧಾನವೂ ಇಲ್ಲ" ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರತ್ ನೀಲಕಂಠ ಎಂ ಹೆಗ್ಡೆ, ಉಪ ಗವರ್ನರ್ ವಿಶ್ವನಾಥ್ ಶೆಟ್ಟಿ, ಒಳಕಾಡು ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ಬಿ, ಆರ್ಟಿಒ ಜೆ.ಪಿ.ಗಂಗಾಧರ್, ನಂದ ಕಿಶೋರ್, ಅನಂತರಾಮ್ ವಾಗ್ಳೆ, ರಾಮ್ ದಾಸ್ ಶೆಟ್ಟಿಗಾರ್, ಹರೀಶ್ ಪೂಜಾರಿ, ಜಯಪ್ರಕಾಶ್ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.
ಈ ಸಂಧರ್ಭ, ವಿದ್ಯಾರ್ಥಿಗಳಿಗೆ ರಸ್ತೆ ಅಪಘಾತಗಳಿಂದಾಗುವ ಅನಾಹುತಗಳು ಮತ್ತು ಅವುಗಳನ್ನು ಹೇಗೆ ತಪ್ಪಿಸಬಹುದು ಎಂಬ ಕುರಿತಾಗಿ ವಿಡಿಯೋ ಪ್ರದರ್ಶನ ಕೂಡಾ ಜರುಗಿತು.