ಮಂಜೇಶ್ವರ, ಫೆ. 11 (DaijiworldNews/SM): ಫ್ಯಾಶನ್ ಗೋಲ್ಡ್ ಜುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. 93 ದಿನಗಳ ಸೆರೆವಾಸ ಅನುಭವಿಸಿದ ಬಳಿಕ ಕೊನೆಗೂ ಕಮರುದ್ದೀನ್ ಜೈಲು ಮುಕ್ತರಾಗಿದ್ದಾರೆ.

ಕಮರುದ್ದೀನ್ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಲಭಿಸಿದ ಹಿನ್ನಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ 148 ಪ್ರಕರಣಗಳು ಕಮರುದ್ದೀನ್ ವಿರುದ್ಧ ದಾಖಲಾಗಿತ್ತು. ಅಂತಿಮವಾಗಿ ಆರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಹೊಸದುರ್ಗ ನ್ಯಾಯಾಲಯ ಬುಧವಾರ ಜಾಮೀನು ನೀಡಿತ್ತು. ಇದರಿಂದ ಕಮರುದ್ದೀನ್ ಜೈಲುವಾಸಕ್ಕೆ ಮುಕ್ತಿ ಲಭಿಸಿದಂತಾಗಿದೆ.
ಅಂತಿಮ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಗುರುವಾರ ರಾತ್ರಿ ವೇಳೆಗೆ ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿದ್ದ ಕಮರುದ್ದೀನ್ ಬಿಡುಗಡೆಗೊಂಡರು. ಜೈಲು ಮುಕ್ತಗೊಂಡರೂ ಪ್ರಕರಣ ದಾಖಲಾಗಿರುವ ಪೊಲೀಸ್ ಠಾಣಾ ವ್ಯಾಪ್ತಿಗೆ ತೆರಳುವಂತಿಲ್ಲ. ಆದರೆ ಕ್ಷೇತ್ರವಾದ ಮಂಜೇಶ್ವರಕ್ಕೆ ತೆರಳಬಹುದಾಗಿದೆ. ಮಂಜೇಶ್ವರ ಠಾಣೆಯಲ್ಲಿ ಶಾಸಕನ ವಿರುದ್ಧ ಯಾವುದೇ ವಂಚನೆ ಮೊಕದ್ದಮೆ ದಾಖಲಾಗಿಲ್ಲ ಕಮರುದ್ದೀನ್ ವಿರುದ್ಧ 115 ದೂರುಗಳು ಲಭಿಸಿದ್ದವು.
ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 155, ಬೇಕಲ 6, ಪಯ್ಯನೂರು 27, ಕಾಸರಗೋಡು ನಗರ ಠಾಣೆ 28, ಕಣ್ಣೂರು, ತಲಶ್ಯೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 148 ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಕಮರುದ್ದೀನ್ ನ್ನು ಬಂಧಿಸಲಾಗಿತ್ತು. ನವಂಬರ್ 7ರಂದು ಕಮರುದ್ದೀನ್ ರನ್ನು ಬಂಧಿಸಲಾಗಿತ್ತು.