ಮಂಗಳೂರು, ಜು 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯೂ ಅಧಿಕ ಮಲೇರಿಯಾ ಪ್ರಕರಣ ದಾಖಲಾಗಿದೆ .ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸುವ ಸಂಬಂಧ ಆರೋಗ್ಯ ಇಲಾಖೆಯು ಹಲವು ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದರೂ, ಮಲೇರಿಯಾ ಪ್ರಕರಣ ಹೆಚ್ಚಳವಾಗುತ್ತಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯು ಕೆಲವು ವರ್ಷಗಳಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಹೆಚ್ಚಳವಾಗುತ್ತಿದೆ.
ಮಂಗಳೂರಿನಲ್ಲೇ ಈ ಬಾರಿ ಜೂನ್ ತಿಂಗಳಾಂತ್ಯದವರೆಗೆ ಒಟ್ಟು 1519 ಪ್ರಕರಣಗಳ ಪೈಕಿ 1389 ಪ್ರಕರಣಗಳು ನಗರದಿಂದಲೇ ವರದಿಯಾಗಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ಅತೀ ಹೆಚ್ಚು ಅಂದರೆ 473 ಪ್ರಕರಣ ಕಂಡು ಬಂದಿದೆ. ಜನವರಿಯಲ್ಲಿ 287, ಫೆಬ್ರವರಿಯಲ್ಲಿ 170, ಮಾರ್ಚ್ನಲ್ಲಿ 231, ಏಪ್ರಿಲ್ನಲ್ಲಿ 175, ಮೇಯಲ್ಲಿ 233 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ಪೈಕಿ ನಗರದಲ್ಲಿ ಜನವರಿ 268, ಫೆಬ್ರವರಿಯಲ್ಲಿ 152, ಮಾರ್ಚ್ 219, ಏಪ್ರಿಲ್ನಲ್ಲಿ 165, ಮೇಯಲ್ಲಿ 201 ಹಾಗೂ ಜೂನ್ನಲ್ಲಿ 284 ಪ್ರಕರಣಗಳ ಮೂಲಕ ಒಟ್ಟು 1389 ಮಲೇರಿಯಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಆರೋಗ್ಯ ಇಲಾಖೆ ಎಚ್ಚರಿಕೆಯ ಹೊರತೂ ನಗರದಲ್ಲಿ ಮಲೇರಿಯಾ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.