ಕುಂದಾಪುರ, ಜು 12: ಕರಾವಳಿ ಮಿತ್ರ ಬಳಗ ಮತ್ತು ಯಕ್ಷ ಸಂಘಟಕ ಮಿತ್ರರ ಒಕ್ಕೂಟ ಬೆಂಗಳೂರು ಇವರು ನೀಡುವ ಕರಾವಳಿ ರತ್ನ ಪ್ರಶಸ್ತಿ-2018 ಯಕ್ಷಗಾನ ಕಲಾ ಸೇವೆಗಾಗಿ ಈ ಬಾರಿ ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಉಮೇಶ ಸುವರ್ಣ ಗೋಪಾಡಿ ಅವರಿಗೆ ದೊರಕಿದೆ. ಜು.23ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕುಂದಾಪುರ ಸಮೀಪದ ಗೋಪಾಡಿ ಉಮೇಶ ಸುವರ್ಣ ಅವರು ಕಳೆದ 28 ವರ್ಷಗಳಿಂದ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಮಾರಣಕಟ್ಟೆ ’ಎ’ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ. ಗೋಪಾಡಿ ಗೋಳಿಬೆಟ್ಟು ದಿ|ಕೂಸ ಸುವರ್ಣ ಮತ್ತು ಗುಲಾಬಿ ದಂಪತಿಗಳ ಪುತ್ರರಾಗಿ ಜನಿಸಿದ ಇವರು ದಿ|ಕಾಳಿಂಗ ನಾವಡ ಗಾನಸಿರಿಗೆ ಆಕರ್ಷಿತರಾಗಿ ಯಕ್ಷಗಾನದತ್ತ ಒಲವು ಹೊಂದಿದವರು. ಐರೋಡಿ ರಾಮ ಗಾಣಿಗರಿಂದ ತಾಳ ಮತ್ತು ನೃತ್ಯಾಭ್ಯಾಸ, ಭಾಗವತ ಕೆ.ಪಿ ಹೆಗಡೆಯವರಿಂದ ಭಾಗವತಿಕೆ ತರಬೇತಿ ಪಡೆದು 1989-90ನೇ ಸಾಲಿನಲ್ಲಿ ಮಾರಣಕಟ್ಟೆ ಮೇಳದ ತಿರುಗಾಟಕ್ಕೆ ಸಹಭಾಗವತರಾಗಿ ನಿಯುಕ್ತರಾದರು. ಮಾರಣಕಟ್ಟೆ ಮೇಳದ ಅಂದಿನ ಯಜಮಾನರಾದ ದಿ|ಎಂ.ಎಂ.ಹೆಗ್ಡೆ ಅವರ ಶಿಸ್ತಿನ ಗರಡಿಯಲ್ಲಿ ಪಳಗಿದ ಅವರು ಮಾರಣಕಟ್ಟೆ ಮೇಳದಲ್ಲಿಯೇ ಪ್ರವರ್ಧಮಾನ ಕಂಡರು. ಜೋಡಾಟದ ಸಂದರ್ಭದಲ್ಲಿ ಜೋಡಾಟ ಹುಲಿ ಎಂದೇ ಖ್ಯಾತಿ ಪಡೆದ ಇವರ ಏರುಸ್ಥಾಯಿ ಪದ್ಯಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.
ಸಾಂಪ್ರಾದಾಯಿಕ ಶೈಲಿಯನ್ನು ಉಳಿಸಿಕೊಂಡಿರುವ ಸುವರ್ಣರ ಭಾಗವತಿಕೆ ವಿವಿಧ ಸಿಡಿ, ಕೆಸೆಟುಗಳಲ್ಲಿ ಮುದ್ರಣವಾಗಿದೆ. ಯಕ್ಷಗಾನ ಪದ್ಯ ರಚನೆಕಾರರಾಗಿ, ನಿರ್ದೇಶಕರಾಗಿ, ರಂಗ ಸಂಯೋಜಕರಾಗಿ, ಹಲವು ವಿದ್ಯಾರ್ಥಿಗಳಿಗೆ ಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ತಂಡದಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು, ಜಪಾನ್, ಹಾಂಕಾಂಗ್, ರಷ್ಯಾ, ಬೆಲ್ಜಿಯಂ ಸೇರಿದಂತೆ ಹಲವಾರು ದೇಶಗಳಲ್ಲಿ ತನ್ನ ಗಾನಸುಧೆಯನ್ನು ಹರಿಸಿದ್ದಾರೆ.ಹಲವಾರು ಪ್ರಶಸ್ತಿ, ಗೌರವ, ಸನ್ಮಾನಗಳು ಇವರಿಗೆ ಲಭಿಸಿವೆ. ’ಕರಾವಳಿ ರತ್ನ’ ಪ್ರಶಸ್ತಿ ಲಭಿಸಿದ ಬಗ್ಗೆ ಸಂತಷ ವ್ಯಕ್ತ ಪಡಿಸುತ್ತಾರೆ. ಪತ್ನಿ ರೇವತಿ, ಪುತ್ರಿ ನಾದಶ್ರೀ, ಪುತ್ರ ಮೋದನ್ರೊಂದಿಗಿನ ಸಂತೃಪ್ತ ಸಂಸಾರ ಇವರದ್ದು.
ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿರುವ ಇಂಥಹ ಪ್ರತಿಭೆಗಳನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ. ಕರಾವಳಿ ರತ್ನ ಪ್ರಶಸ್ತಿ ಆರ್ಹವಾಗಿಯೇ ಇವರಿಗೆ ಲಭಿಸಿದೆ.