ಮಂಗಳೂರು, ಫೆ.12 (DaijiworldNews/HR): ಪಿವಿಎಸ್ ಕಲಾಕುಂಜ್ ರಸ್ತೆಯಲ್ಲಿಯಲ್ಲಿರುವ ಬಿಜೆಪಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಹಲವಾರು ಜೆಡಿ (ಎಸ್) ಪಕ್ಷದ ಕಾರ್ಯಕರ್ತರು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.













ಕೋಟಿ-ಚೆನ್ನಯ ಮತ್ತು ಬಿಲ್ಲವ ನಾಯಕ ಜನಾರ್ಧನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿಯನ್ನು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿ (ಎಸ್) ಪಕ್ಷದ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನಾಕಾರರು ಶಾರದಾ ವಿದ್ಯಾಲಯದ ಸಮೀಪದಿಂದ ಕಲಾಕುಂಜ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಮೆರವಣಿಗೆ ನಡೆಸಿದರು. ಆದರೆ ಮೆರವಣಿಗೆಯನ್ನು ಪೂರ್ಣಗೊಳಿಸುವ ಮೊದಲು, ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಎಸಿಪಿ ಜಗದೀಶ್ ನೇತೃತ್ವದ ಪೊಲೀಸರು ಮತ್ತು ಪಾಂಡೇಶ್ವರ ಮತ್ತು ಬಂದರು ಪೊಲೀಸ್ ಸಿಬ್ಬಂದಿ ಜಿಲ್ಲಾ ಯುವ ಜೆಡಿ (ಎಸ್) ಅಧ್ಯಕ್ಷ ಅಕ್ಷತ್ ಸುವರ್ಣ ಸೇರಿದಂತೆ 30 ಕ್ಕೂ ಹೆಚ್ಚು ಜೆಡಿ (ಎಸ್) ಪಕ್ಷದ ಕಾರ್ಯಕರ್ತರನ್ನು ಸುತ್ತುವರೆದು ಕರೆದೊಯ್ದರು.
ಕೋಟಿ-ಚೆನ್ನಯ ಮತ್ತು ಜನಾರ್ಧನ ಪೂಜಾರಿ ಕುರಿತು ಜಗದೀಶ್ ಅಧಿಕಾರಿ ಅವರ ಹೇಳಿಕೆಗಳು ಕರಾವಳಿಯಲ್ಲಿ ತೀವ್ರ ಚರ್ಚೆಯನ್ನು ಉಂಟುಮಾಡಿದ್ದು, ಬಿಲ್ಲವ ನಾಯಕರು ಮತ್ತು ರಾಜಕಾರಣಿಗಳು ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಬಿಲ್ಲವ ಸಮುದಾಯದ ಯಾರಾದರು ಅಧಿಕಾರಿಯ ಮುಖಕ್ಕೆ ಮಸಿ ಬಳೆದರೆ ಅವರಿಗೆ 1 ಲಕ್ಷ ರೂ. ನೀಡುವುದಾಗಿಯೂ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಹೇಳಿದ್ದರು, ಆದರೆ ಅಧಿಕಾರಿ ಕ್ಷಮೆಯಾಚಿಸಿದ ಬಳಿಕ ಈ ಮಾತನ್ನು ಹಿಂತೆಗೆದುಕೊಂಡ ಪ್ರತಿಭಾ ಆ ಹಣವನ್ನು ಹಿಂದುಳಿದ ಮಕ್ಕಳ ಶಿಕ್ಷಣಕ್ಕಾಗಿ ನೀಡಿದ್ದಾರೆ.
ಇನ್ನು ಕೋಟಿ-ಚೆನ್ನಯ ಗರೋಡಿ ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಾಗಿ ಮತ್ತು ಜನಾರ್ಧನ ಪೂಜಾರಿಗೆ ವೈಯಕ್ತಿಕವಾಗಿ ಕ್ಷಮೆಯಾಚಿಸುವುದಾಗಿಯೂ ಜಗದೀಶ್ ಹೇಳಿದ್ದರು ಕೂಡ, ಅವರನ್ನು ಬಿಜೆಪಿಯಿಂದ ಉಚ್ಚಾಟಿಸುವಂತೆ ಜೆಡಿ (ಎಸ್) ಪ್ರತಿಭಟನೆ ನಡೆಸಿದೆ ಎನ್ನಲಾಗಿದೆ.