ಉಳ್ಳಾಲ, ಫೆ. 12 (DaijiworldNews/SM): ಹರೇಕಳ- ಅಡ್ಯಾರ್ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಶಾಸಕ ಯು.ಟಿ ಖಾದರ್ ನೇತೃತ್ವದ ನಿಯೋಗ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ಮಾಧ್ಯಮದ ಜತೆಗೆ ಮಾತನಾಡಿದ ಶಾಸಕರು ' ಬ್ರಿಡ್ಜ್ ಕಂ ಬ್ಯಾರೇಜ್ ಕುರಿತು ಸ್ಥಳೀಯರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದೆ. ಅನುದಾನ ಮಂಜೂರಾಗುವ ಮುನ್ನ ಸೇತುವೆ ಕುರಿತು ಟೀಕೆಗಳು ಕೇಳಿಬಂದಿತ್ತು. ಪ್ರತಿಪಕ್ಷಗಳು ಸಾಧ್ಯವಿಲ್ಲದ ತೀರ್ಮಾನ ಎಂದು ಹೇಳಿಕೆ ನೀಡಿದ್ದರು. ಆದರೆ ಪಶ್ಚಿಮವಾಹಿನಿ ಯೋಜನೆಯ ಅಂಗವಾದ ಎತ್ತಿನ ಹೊಳೆ ಯೋಜನೆಯಲ್ಲಿ ಜಿಲ್ಲೆಗೆ ಅನ್ಯಾಯವಾಗಿದೆ ಈ ಬಗ್ಗೆ ನ್ಯಾಯ ಕೊಡುವ ಉದ್ದೇಶದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.











ಸ್ವಾಭಿಮಾನಿ ಗುತ್ತಿಗೆದಾರ ಜಿ. ಶಂಕರ್ ಆಂಡ್ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಒಟ್ಟು ವೆಚ್ಚ 200 ಕೋಟಿ ರೂ. ಇಡಲಾಗಿತ್ತು. ಡಿಪಿಆರ್ ನಲ್ಲಿ ಟೆಂಡರ್ ಕರೆದಾಗ ರೂ. 192.5 ಕೋಟಿಗೆ ಕಾಮಗಾರಿಯ ಗುತ್ತಿಗೆಯನ್ನು ಜಿ.ಶಂಕರ್ ಕಂಪೆನಿ ಕಾಮಗಾರಿ ವಹಿಸಿಕೊಂಡರು. ಮುಂದಿನ ಮಳೆಗಾಲ ಬರುವ ಮುನ್ನ ಪಾದಚಾರಿಗಳಿಗೆ ನಡೆದುಕೊಂಡು ಹೋಗುವ ವ್ಯವಸ್ಥೆಯನ್ನು ನೂತನ ಡ್ಯಾಂನಲ್ಲಿ ಕಲ್ಪಿಸಲಾಗುವುದು. ಡಿಸೆಂಬರ್ ನಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯನ್ನು ನಡೆಸಲಾಗುವುದು. ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೊದಲ ಯೋಜನೆ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾರೇಜ್ ನಲ್ಲಿ 7.5 ಮೀ. ಅಗಲದ ರಸ್ತೆ, 1 ಮೀ. ನಷ್ಟು ಎರಡು ಕಡೆಗಳಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬೃಹತ್ ವಾಹನಗಳನ್ನು ಸೇತುವೆಯಲ್ಲಿ ಬಿಡಲಾಗುವುದಿಲ್ಲ. ಗ್ರಾಮೀಣ ಮಟ್ಟ ಹರೇಕಳ ಸಂಸ್ಕೃತಿಯನ್ನು ಸಂಪೂರ್ಣ ನಶಿಸಿ ಹೋಗುವ ಸಾಧ್ಯತೆಯಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ. ಸೇತುವೆ ಮೂಲಕ ಮಂಗಳೂರು ತಲುಪಬೇಕಾದ ಗ್ರಾಮದ ಜನರಿಗೆ 25 ಕಿ.ಮೀ. ಕಡಿಮೆಯಾಗಲಿದೆ. ನಿರ್ಮಾಣ ಹಂತದಲ್ಲಿರುವ ಬ್ಯಾರೇಜ್ ನಲ್ಲಿ 18.7 ಮಿಲಿಯನ್ ಕ್ಯೂಸೆಕ್ಸ್ ಮೀ. ನೀರು ಶೇಖರಿಸುವ ಸಾಮರ್ಥ್ಯವಿದೆ. ತುಂಬೆಯಲ್ಲಿ ನೀರು ಖಾಲಿಯಾದಲ್ಲಿ ನಗರ ಪ್ರದೇಶಕ್ಕೆ ನೂತನ ಯೋಜನೆಯಿಂದ ನೀರು ಕೊಡುವ ಕಾರ್ಯ ಆಗಲಿದೆ. ಸೇತುವೆ ನಿರ್ಮಾಣದಿಂದ ಹರೇಕಳ ಗ್ರಾಮ ಪ್ರವಾಸೋದ್ಯಮ ಕೇಂದ್ರವೂ ಆಗಲಿದೆ. ಡ್ಯಾಂ ನೋಡಲೆಂದೇ ಜನ ಬಂದಾಗ ವ್ಯಾಪಾರ ವಹಿವಾಟುಗಳು ಅಭಿವೃದ್ಧಿ ಆಗಲಿದೆ. ಬೋಟ್ ರೈಡಿಂಗ್, ಮೀನು ಸಂತಾನ ಉತ್ಪತ್ತಿ ಕಾರ್ಯಗಳಿಗೂ ಇಲ್ಲಿ ಚಾಲನೆ ನೀಡಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.