ಮಂಗಳೂರು, ಫೆ.13 (DaijiworldNews/HR): ಕಿರಿಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ನಡೆಸಿದ ಆರೋಪದಲ್ಲಿ ದೇರಳಕಟ್ಟೆ ಖಾಸಗಿ ಕಾಲೇಜಿನ 11 ವಿದ್ಯಾರ್ಥಿಗಳು ಬಂಧತರಾಗಿದ್ದು, ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.



ಕಾಲೇಜ್ನ ಎರಡನೇ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ 18 ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಕ್ಯಾಂಪಸ್ ಆಫೀಸರ್ ಮಾರ್ಟಿನ್ ಜೋರ್ಜ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ವಿದ್ಯಾರ್ಥಿಗಳಾದ ಕೇರಳದ ಕ್ಯಾಲಿಕಟ್ನ ಪಾಳಿಯಾಡ್ ನಿವಾಸಿ ಮುಹಮ್ಮದ್ ಶಮ್ಮಾಸ್ (19), ಕೊಟ್ಟಾಯಂ ವೈಕ್ಯಂ ನಿವಾಸಿ ಅಕ್ಷಯ್ ಕೆ.ಎಸ್. (19), ಕೊಟ್ಟಾಯಂ ಅಯರ್ ಕುನ್ನ ರೋಬಿನ್ ಬಿಜು (20), ಕಾಸರಗೋಡು ಉಳ್ಳೂರಿನ ಅಬ್ದುಲ್ ಅನಸ್ (21), ಚಿಟ್ಟಾರಿಕಲ್ ಜೆಫಿನ್ ರೋಯಿಚನ್ (19), ಕೊಟ್ಟಾಯಂನ ಅಲ್ವಿನ್ ಜೋಯ್ (19), ಜೆರೋನ್ ಸಿರಿಲ್ (19), ಪತ್ತನಂತಿಟ್ಟ ನಿವಾಸಿ ಸೂರಜ್ (19), ಚೆಮ್ಮತ್ತೂರು ಆಸಿನ್ ಬಾಬು (19), ಮಲಪುರಂ ಜುಬಿನ್ ಮೆಹರೂಫ್ (21), ಅಬ್ದುಲ್ ಬಾಸಿತ್ (19) ಎಂಬವರನ್ನು ಬಂಧಿಸಿದ್ದರು.
ಬಂಧಿತ ವಿದ್ಯಾರ್ಥಿಗಳ ಪರ ವಕೀಲರಾದ ಮಹಮ್ಮದ್ ಅಸ್ಗರ್ ಮುಡಿಪು ಮತ್ತು ಆಸಿಫ್ ಬೈಕಾಡಿ ವಾದ ಮಂಡಿಸಿ ಒಂದೇ ದಿನದಲ್ಲಿ ಜಾಮೀನು ಸಿಗುವಂತೆ ಮಾಡಿದ್ದಾರೆ ಎನ್ನಲಾಗಿದೆ.