ಮಂಗಳೂರು, ಫೆ.13 (DaijiworldNews/PY): ನಗರ ಲಾಲ್ಭಾಗ್ ಬಳಿ ಫೆ.7ರ ರಾತ್ರಿ ತಂಡವೊಂದು ಯುವಕನೋರ್ವನ ಮಾರಕಾಯುಧದಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕುದ್ರೋಳಿ ನಿವಾಸಿಗಳಾದ ಮೊಹಮ್ಮದ್ ಫಾಯಿಕ್ (18) ಮೊಹಮ್ಮದ್ ಶಾಹಿಲ್ (19) ಹಾಗೂ ಇನ್ನೋರ್ವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.7ರ ರವಿವಾರದಂದು ರಾತ್ರಿ 9.20ರ ಸುಮಾರಿಗೆ ದೀಪಕ್ ಕುಮಾರ್ ಎಂಬವರಿಗೆ ಲಾಲ್ ಬಾಗ್ ಬಳಿ ಮೂರು ಜನ ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಎಡಗೈಯ ಮುಂಗೈಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಅದರಂತೆ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಇತರರ ಬಗ್ಗೆ ತನಿಖೆ ಮುಂದುವರೆದಿದೆ.