ಬಂಟ್ವಾಳ, ಜು 12: ಪ್ರತಿದಿನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕೃಷಿ, ರೈತರ ಕಾಯಕಗಳ ಬಗ್ಗೆ ಪಾಠ ಕೇಳುತ್ತಿದ್ದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನೆಡುವ ಮೂಲಕ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು. ಕಲ್ಲಡ್ಕದ ಸುದೆಕಾರ್ ಎಂಬಲ್ಲಿ ಶಾಲೆಗೆ ಸೇರಿದ ಸುಮಾರು ಐದು ಎಕರೆ ಜಮೀನಿನಲ್ಲಿ ಸುಮಾರು 5 ವರ್ಷಗಳಿಂದ ಭತ್ತದ ಕೃಷಿಯನ್ನು ಮಾಡಲಾಗುತ್ತಿದೆ.
ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಮಕ್ಕಳಿಗೆ ಗ್ರಾಮೀಣ ಬದುಕು ದೂರವಾಗುತ್ತಿದೆ. ಕೃಷಿ ಆಧಾರಿತ ಜಿಲ್ಲೆಯ ಮಕ್ಕಳಿಗೆ ಈ ಮಣ್ಣಿನ ಸತ್ವದ ಬಗ್ಗೆ ಶಿಕ್ಷದ ಜೊತೆಯಲ್ಲಿ ಅಭ್ಯಾಸ ಮಾಡುವ ಯೋಚನೆಯಿಂದ ಈ ಶಾಲೆಯ ಸಮಿತಿ ಕಳೆದ ಐದು ವರ್ಷಗಳಿಂದ ಈ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ನೇಜಿ ತೆಗೆಯುವುದು, ನೇಜಿ ನೆಡುವುದು, ಬಳಿಕ ಭತ್ತದ ಕೆಲಸ, ಕೊಯ್ಲು, ಗದ್ದೆ ಉಳುಮೆ ಮಾಡುವುದು ಹೀಗೆ ನಾಟಿಗೆ ಬೇಕಾದ ಕೆಲಸಗಳನ್ನು ಇಂದಿನ ಯುವ ವಿದ್ಯಾರ್ಥಿ ಸಮೂಹಕ್ಕೆ ತಿಳಿಸುವುದು, ಆ ಮೂಲಕ ಕೃಷಿಯನ್ನು ಉಳಿಸುವುದು ಮತ್ತು ಕೃಷಿ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ಸ್ವತಃ ಗದ್ದೆಗಿಳಿದು ನೇಜಿ ಕಾರ್ಯದಲ್ಲಿ ಭಾಗಿಯಾದ ಡಾ.ಪ್ರಭಾಕರ ಭಟ್ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.