ಮಂಗಳೂರು, ಫೆ.13 (DaijiworldNews/MB) : ''ವಿಶ್ವವಿದ್ಯಾನಿಲಯ ಕಾಲೇಜಿನ ಚಿತ್ರಣವೇ ಬದಲಾಗಿ ಅದೀಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ರಾಜ್ಯ ಸರ್ಕಾರದ ಹಂತದಲ್ಲಿ ಈ ಐತಿಹಾಸಿಕ ಕಾಲೇಜಿನ ಅಭಿವೃದ್ಧಿಗೆ ಬೇಕಾದ ಎಲ್ಲಾ ಅನುದಾನವನ್ನು ಕೊಡಿಸಲು ನಾನು ಬದ್ಧ'' ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು.








ಅವರು ಶನಿವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆರ್ಯುಎಸ್ಎ/ಯುಜಿಸಿ ಯೋಜನೆಯಡಿ ನಿರ್ಮಾಣಗೊಂಡ ತರಗತಿ ಕೊಠಡಿಗಳ ಉದ್ಘಾಟನೆ ಮತ್ತು ತರಗತಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ''ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ ರಚನೆಯಾಗಿರುವುದು ಸಂತಸದ ವಿಷಯ. ನನ್ನ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎರಡು ಕಾಲೇಜುಗಳಿಗೆ ಒಟ್ಟು 13 ಕೋಟಿ ಅನುದಾನ ಕೊಡಿಸಿದ್ದೇನೆ. ವಿವಿ ಕಾಲೇಜಿಗೆ ಹೆಚ್ಚಿನ ಆಧ್ಯತೆ ಸಿಗಲಿದೆ'' ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ''ನಗರದ ಹೃದಯದ ಭಾಗದಲ್ಲಿರುವ ವಿವಿ ಕಾಲೇಜು ಹೆಮ್ಮೆಯ ಪ್ರತೀಕ ಮತ್ತು ಇದರ ಅಭಿವೃದ್ಧಿಗೆ ವಿಶ್ವವಿದ್ಯಾನಿಲಯ ಸದಾ ನೆರವಾಗುತ್ತದೆ. ಸಂಧ್ಯಾ ಕಾಲೇಜಿನ ಅಭಿವೃದ್ಧಿ ಕುರಿತು ತಿಂಗಳ ಕೊನೆಯಲ್ಲಿ ಚರ್ಚೆ ನಡೆಯಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ ಅಭಿವೃದ್ಧಿಯ ದೆಸೆಯಲ್ಲಿ ಮುಂದೆ ಮತ್ತಷ್ಟು ನೆರವಾಗುವ ನಿರೀಕ್ಷೆಗಳಿವೆ. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾರ್ಹತೆಯ ಕಡೆಗೆ ಹೆಚ್ಚಿನ ಗಮನಹರಿಸಲಾಗುವುದು'' ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು. ವಿಶ್ವವಿದ್ಯಾನಿಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ ಕೆ ಎಸ್ ಜಯಪ್ಪ ಗಣಿತ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರವೀಂದ್ರನಾಥ ರೈ, ರವಿಚಂದ್ರ, ರಮೇಶ್, ವಿಶ್ವವಿದ್ಯಾನಿಲಯದ ಕಾರ್ಯಕಾರಿ ಅಭಿಯಂತರರಾದ ಉಮೇಶ್ ಭಟ್ ವೈ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಭಾಸ್ಕರಚಂದ್ರ ಶೆಟ್ಟಿ, ಯುಜಿಸಿ ಯೋಜನೆಯ ಸಂಯೋಜಕ ಸುಬ್ರಹ್ಮಣ್ಯ ಭಟ್ ಎನ್ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ ಹರೀಶ ಅತಿಥಿಗಳನ್ನು ಸ್ವಾಗತಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಜಯವಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಆರ್ಯುಎಸ್ಎ ಸಂಯೋಜಕಿ ಡಾ. ಶೋಭಾ ಧನ್ಯವಾದ ಸಮರ್ಪಿಸಿದರು.